ಬಂಟವಾಳ ತಾಲೂಕು ಬಂಟರ ಸಂಘ ದ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ವಲಯ ಬಂಟರ ಸಂಘದ ಸಹಯೋಗದೊಂದಿಗೆ ವಾರ್ಷಿಕ ಕ್ರೀಡೋತ್ಸವ ಡಿ.2 ರಂದು ನಡೆಯಲಿದೆ. ತಾಲೂಕಿನ ಸಜೀಪ ಶ್ರೀಕ್ಷೇತ್ರ ಮಿತ್ತಮಜಲು ಸಂಕೇಶ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಬಂಟವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ ಶೆಟ್ಟಿ ತಿಳಿಸಿದ್ದಾರೆ.
ಬಂಟರ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕ್ರೀಡೋತ್ಸವವು ಸಜೀಪ ಬಂಟರ ವಲಯದ ಪ್ರಾಯೋಜಕತ್ವದಲ್ಲಿ ಅತ್ಯಂತ ವ್ಯವಸ್ಥಿತ ಮತ್ತು ಅದ್ದೂರಿಯಾಗಿ ನಡೆಸಲಾಗುತ್ತಿದ್ದು, ಬೆಳಿಗ್ಗೆ ಕ್ರೀಡೋತ್ಸವಕ್ಕೆ ಮುನ್ನ 14 ವಲಯ ಬಂಟರ ಸಂಘಗಳಿಂದ ಆಕರ್ಷಕ ಪಥಸಂಚಲನವು ನಡೆಯಲಿದೆ. ಎಲ್ಲಾ ಗುಂಪು ಮತ್ತು ಸ್ವತಂತ್ರಸ್ಪರ್ಧೆಗಳ ಏಕಕಾಲಕ್ಕೆ ಆರಂಭವಾಗಲಿದ್ದು ,ಸ್ವತಂತ್ರ,ಗುಂಪು, ಮನೋರಂಜನ ಸ್ಪರ್ಧೆ ಗಳು ನಡೆಯಲಿವೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಂಭೈ ಪನ್ವೇಲ್ ನ ಕಾರ್ಪೊರೇಟರ್ ಸಂತೋಷ ಶೆಟ್ಟಿ ದಲಂಬಿಲ, ಮುಂಬೈಯ ಉದ್ಯಮಿ ಆನಂದ ರೈ ಮಾಡಂತಾಡಿಗುತ್ತು ಅತಿಥಿಯಾಗಿ ಭಾಗವಹಿಸಲಿದ್ದು, ಕ್ರೀಡಾಕೂಟದಲ್ಲಿ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವ ಕ್ರೀಡಾಳುಗಳನ್ನು ಗೌರವಿಸಲಾಗುವುದು ಎಂದರು.
42 ಲಕ್ಷ ರೂ ವಿದ್ಯಾರ್ಥಿ ವೇತನ ವಿತರಣೆ :
ಬಂಟ್ವಾಳ ಬಂಟರ ಸಂಘದಿಂದ ಆಲ್ ಕಾರ್ಗೋ ಸಂಸ್ಥೆಯ ಸಹಕಾರದಿಂದ ಕಳೆದ ಸಾಲಿನಲ್ಲಿ ಬಂಟ ಸಹಿತ ಎಲ್ಲಾ ವರ್ಗದ 32 ಲಕ್ಷರೂ .ವಿದ್ಯಾರ್ಥಿ ವೇತನ ವಿತರಿಸಲಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 1200 ವಿದ್ಯಾರ್ಥಿ ಗಳಿಗೆ 42 ಲಕ್ಷ ರೂ.ವಿದ್ಯಾರ್ಥಿ ವೇತನ ವಿತರಿಸಲಾಗಿದೆ. ಇಬ್ಬರು ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಉನ್ನತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ವಿವೇಕ್ ಶೆಟ್ಟಿ ಹೇಳಿದರು.
ಬಂಟ್ವಾಳ ಬಂಟರ ಸಂಘ ದಿಂದ ಸಮುದಾಯದ ಬಡ ಮಕ್ಕಳಿಗೆ ಶಿಕ್ಷಣ ,ಆರೋಗ್ಯ ಮತ್ತು ವಿವಾಹಕ್ಕೆ ಆದ್ಯತೆ ನೀಡಲಾಗುತ್ತಿದ್ದು,ಬಂಟ ಮಹಿಳಾ ಘಟಕದ ವತಿಯಿಂದ ಉಚಿತವಾಗಿ ಇಬ್ಬರು ಬಡ ಹೆಣ್ಣು ಮಕ್ಕಳಿಬ್ಬರಿಗೆ ವಿವಾಹ ಕಾರ್ಯ ಬಂಟರ ಭವನದಲ್ಲಿಯೇ ನೆರವೇರಲಿದೆ. ಪ್ರತಿವರ್ಷ ತಾಲೂಕಿನ ಬಂಟ ಸಮುದಾಯದ ಬಡ ಇಬ್ಬರು ಬಡ ಹೆಣ್ಣುಮಕ್ಕಳಿಗೆ ವಿವಾಹ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎಂದ ವಿವೇಕ್ ಶೆಟ್ಟಿ ಮುಂದಿನ ದಿನಗಳಲ್ಲಿ ಮನೆಯಿಲ್ಲದ ಬಡ ಕುಟುಂಬಗಳನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಯೋಚನೆಯು ಇದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಜಗದೀಶ ಶೆಟ್ಟಿ ಇರಾಗುತ್ತು, ನವೀನಚಂದ್ರ ಶೆಟ್ಟಿ ಮುಂಡಾಜೆಗುತ್ತು, ಕಿರಣ್ ಹೆಗ್ಡೆ ಅನಂತಾಡಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಪ್ರಸಾದ್ ರೈ, ಕ್ರೀಡೋತ್ಸವ ಸಮಿತಿ ಸಂಚಾಲಕ ಗಂಗಾಧರ ರೈ, ಸಜೀಪ ವಲಯ ಬಂಟರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಜಗದೀಶ್ ಮೊದಲಾದವರಿದ್ದರು.