ಮಂಗಳೂರಿನ ಕಡಲ ಕಿನಾರೆಯಲ್ಲಿ ಬಂಟ್ವಾಳ ಮೂಲಕ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಆರೋಪಿಗಳಿಗೆ ಗರಿಷ್ಠ ಮಟ್ಟದ ಶಿಕ್ಷೆಯಾಗಬೇಕು, ಅವರ ಪರ ನ್ಯಾಯವಾದಿಗಳು ವಾದ ಮಾಡದೆ ಜಿಲ್ಲೆಯ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಪ್ರೇಮಿಗಳ ಮೇಲೆ ನಡೆದ ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೋಲಿಸ್ ಕಮೀಷನರ್ ಮತ್ತು ತಂಡವನ್ನು ಬಂಟ್ವಾಳ ಯುವಮೋರ್ಚಾ ಅಭಿನಂದಿಸುತ್ತದೆ. ಸರಕಾರ ಮತ್ತು ಪೋಲಿಸ್ ಇಲಾಖೆ ಈ ಅತ್ಯಚಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ತಪ್ಪಿಸಿಕೊಳ್ಳಲು ಸಹಕರಿಸಿದವರೆಲ್ಲರನ್ನು ಆರೋಪಿಗಳನ್ನಾಗಿ ಮಾಡಬೇಕು. ಬಂಧಿತರ ಭೇಟಿಗೆ ಬರುವವರನ್ನು, ಜಾಮೀನಿಗೆ ಪ್ರಯತ್ನಿಸುವವರ ಮೇಲೆ ನಿಗಾ ಇಡುವುದಲ್ಲದೆ ನ್ಯಾಯಲಯ ಈ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಿ ಆರೋಪಿಗಳಿಗೆ ಗಲ್ಲುಶಿಕ್ಷೆಯಂತ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಯುವಮೋರ್ಚಾ ಒತ್ತಾಯಿಸಿದೆ.
ದೌರ್ಜನ್ಯಕ್ಕೆ ಒಳಗಾದ ಯುವತಿಗೆ ವೈದ್ಯಕೀಯ ವೆಚ್ಟ, ಕಾನೂನಿನ ರಕ್ಷಣೆ, ಮತ್ತು ಗರಿಷ್ಠ ಪರಿಹಾರ ಧನವನ್ನು ನೀಡಬೇಕೆಂದು ಬಂಟ್ವಾಳ ಯುವಮೋರ್ಚಾ ಆಗ್ರಹಿಸಿದ್ದು, ಕಾನೂನಿನ ಸಹಕಾರ ನೀಡುವುದಾಗಿ ತಿಳಿಸಿದೆ.
ನ್ಯಾಯದ ಪರ ವಾದ ಮಾಡುವ ಮಂಗಳೂರಿನ ಪ್ರಜ್ಞಾವಂತ ನ್ಯಾಯವಾದಿಗಳು ಆರೋಪಿಗಳ ಪರ ವಾದ ಮಾಡದೆ ದ.ಕ ಜಿಲ್ಲೆಯ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕೆಂದು ಮಂಗಳೂರು ಬಾರ್ ಎಸೋಸಿಯೇಶನ್ ನನ್ನು ಯುವಮೋರ್ಚಾವು ವಿನಂತಿಸಿಕೊಳ್ಳುತ್ತದೆ.
ಎಲ್ಲಿಯೋ ಉತ್ತರದ ರಾಜ್ಯಗಳಲ್ಲಿ ಕೇಳಿಬರುತಿದ್ದ ಸಾಮೂಹಿಕ ಅತ್ಯಚಾರದ ಪಿಡುಗು ವಿದ್ಯಾವಂತರ ನಾಡಿನಲ್ಲಿ ಕೇಳಿಬರುತಿರುವುದಕ್ಕೆ ಸರಕಾರದ ವೈಫಲ್ಯ ಮತ್ತು ಪೋಲಿಸ್ ಇಲಾಖೆಯ ನಿರ್ಲಕ್ಷ್ಯವೆ ಕಾರಣವಾಗಿದೆ. ಈ ಪರಿಸರದಲ್ಲಿ ಲೈಂಗಿಕ ದೌರ್ಜನ್ಯ, ದರೋಡೆ, ಸುಲಿಗೆಯಂತ ಪ್ರಕರಣಗಳು ಪದೆ ಪದೆ ನಡೆಯುತ್ತಿದ್ದರೂ ಪೋಲಿಸ್ ಇಲಾಖೆ ನಿಗಾ ಇಡದೆ ಇರುವುದು ಈ ರೀತಿಯ ಗಂಭೀರ ಪ್ರಕರಣಗಳು ನಡೆಯಲು ಕಾರಣವಾಗಿದೆ. ಜಿಲ್ಲೆಯಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಹೆಚ್ಚಿನ ಪ್ರಕರಣಗಳಲ್ಲಿ ಮಾದಕವಸ್ತುಗಲೇ ಮೂಲವಾಗಿರುತ್ತದೆ. ಗುಪ್ತಚಾರ ಮತ್ತು ಪೋಲಿಸ್ ಅಧಿಕಾರಿಗಳು ಇದನ್ನೊಂದು ಸವಾಲಾಗಿ ಸ್ವೀಕರಿಸಿ ಗಾಂಜ ಸಹಿತ ಮಾದಕ ದ್ರವ್ಯಗಳ ನಿರ್ಮೂಲನೆಯ ಬಗ್ಗೆ ಕಠಿನಾತಿಕಠಿಣ ಕಾರ್ಯಾಚರಣೆ ಸಕಾಲದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಯುವ ಮೋರ್ಚಾ ಒತ್ತಾಯಿಸಿದೆ.