ಸ್ಪಷ್ಟ ಸುದ್ದಿಗಳಿಗೆ ಕ್ಲಿಕ್ ಮಾಡಿರಿ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಯಕ್ಷಗಾನಕ್ಕೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ವಿಶೇಷ ಗೌರವ. ಕಾರಣ 99ರ ಹರೆಯದ ಮದ್ದಳೆಯ ಮಾಂತ್ರಿಕ ಎಂದೇ ಹೆಸರಾದ ಹಿರಿಯಡ್ಕ ಗೋಪಾಲರಾಯರಿಗೆ ಪ್ರಶಸ್ತಿ ಘೋಷಣೆ ಮಾಡುವುದರ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಿಸಿಕೊಂಡರೆ, ಚಾರ್ಲಿ ಚಾಪ್ಲಿನ್ ಎಂದೇ ಹೆಸರಾದವರು ಸೀತಾರಾಮ ಕುಮಾರ್ ಕಟೀಲ್.
ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲರಾಯರು
1919ರಲ್ಲಿ ಜನಿಸಿದ ಹಿರಿಯಡ್ಕ ಗೋಪಾಲರಾಯರು ಮದ್ದಳೆಯ ಮಾಂತ್ರಿಕ ಎಂದೇ ಹೆಸರುವಾಸಿ. ಹಿರಿಯಡ್ಕ ಸಮೀಪ ವಾಸಿಸುತ್ತಿರುವ ಇವರು ತಂದೆಯಿಂದಲೇ ಮದ್ದಳೆ ವಾದನ ಕಲಿತವರು. ಬಳಿಕ ಹಿರಿಯಡ್ಕ ಮೇಳ ಸೇರಿ, ಒತ್ತು ಮದ್ದಳೆಗಾರರಾಗಿ ದುಡಿದರು. ಅದಾದ ಬಳಿಕ ಮುಖ್ಯ ಮದ್ದಳೆಗಾರರಾದರು.ಸುಮಾರು 27 ವರ್ಷ ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ ಗೋಪಾಲರಾಯರು, ಡಾ| ಶಿವರಾಮ ಕಾರಂತರ ಒಡನಾಡಿ. ಬ್ರಹ್ಮಾವರ ಯಕ್ಷಗಾನ ಕೇಂದ್ರಕ್ಕೆ ಗುರುವಾಗಿ ಶಿಷ್ಯರನ್ನು ತಯಾರು ಮಾಡಿದವರು. ದೇಶ, ವಿದೇಶಗಳಲ್ಲಿ ಅಪಾರ ಶಿಷ್ಯಬಳಗವನ್ನು ಹೊಂದಿರುವ ಗೋಪಾಲರಾಯರು ಅಮೇರಿಕಾ ಸಹಿತ ಹಲವು ದೇಶಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದಾರೆ.
ಯಕ್ಷರಂಗದ ಚಾರ್ಲಿ ಚಾಪ್ಲಿನ್ ಸೀತಾರಾಮ ಕುಮಾರ್ ಕಟೀಲ್:
ಯಕ್ಷರಂಗದ ಚಾರ್ಲಿ ಚಾಪ್ಲಿನ್ ಸೀತಾರಾಮ ಕುಮಾರ್ ಕಟೀಲ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ. ಸದ್ಯ ಹನುಮಗಿರಿ ಮೇಳದಲ್ಲಿರುವ ಅವರು ಪ್ರಶಸ್ತಿ ಘೋಷಣೆಯಾಗುವ ಸಂದರ್ಭ ಬಣ್ಣ ಹಚ್ಚಿ ಪಾತ್ರ ಮಾಡುತ್ತಿದ್ದರು.
ವಿಜಯ, ಮಕರಂದ, ಶ್ರೀನಿವಾಸನ ಸಖ, ಪೌಂಡ್ರಕನ ಚಾರ, ಮಾಲಿನಿದೂತ, ರುಕ್ಮಿಣಿಯ ಗುರು, ನಂದಿಶೆಟ್ಟಿ, ಕಾಶಿಮಾಣಿ, ವೃದ್ಧಬ್ರಾಹ್ಮಣ, ಮಂತ್ರವಾದಿ, ರಾಕ್ಷಸ ದೂತ, ಅರಬ್ ಕುದುರೆ ವ್ಯಾಪಾರಿ ಮುಂತಾದ ಪಾತ್ರಗಳಲ್ಲಿ ಸೀತಾರಾಮ ಕುಮಾರ್ ಎತ್ತಿದ ಕೈ. 1955ರಂದು ಜನಿಸಿದ ಸೀತಾರಾಮ್, ಉದ್ಯೋಗ ಅರಸಿ ಮುಂಬೈಯತ್ತ ಹೋದರೂ ಯಕ್ಷಗಾನ ಅವರನ್ನು ಸೆಳೆಯಿತು. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಒಡನಾಟದಿಂದ ಕದ್ರಿ ಮೇಳಕ್ಕೆ ಸೇರಿದ ಸೀತಾರಾಮ ಕಟೀಲ್, ಗೆಜ್ಜೆದ ಪೂಜೆ ಪ್ರಸಂಗದ ಕಾಳು ಪಾತ್ರ, ಸೂಪರ್ ಹಿಟ್ ಆಯಿತು. ಬಡಗಿನಲ್ಲಿ ಹಲವಾರು ವರ್ಷಗಳ ತಿರುಗಾಟ ನಡೆಸಿದ ಸೀತಾರಾಮರು ಇದೀಗ ಹನುಮಗಿರಿ ಮೇಳದ ಹಾಸ್ಯಗಾರರು.