ಕವರ್ ಸ್ಟೋರಿ

ಆಟ, ಪಾಠದ ಜೊತೆ ಕೈತೋಟ

ಇಲ್ಲಿ ನಾವು ಮಕ್ಕಳಿಗೆ ಆಟ, ಪಾಠವನ್ನಷ್ಟೇ ಅಲ್ಲ, ಗಿಡಗಳ ಮೇಲೆ ವ್ಯಾಮೋಹ ಹೊಂದುವಂತೆ ಪ್ರೇರೇಪಿಸುತ್ತೇವೆ. ಹೀಗಂದರು ಶಿಕ್ಷಕ ಭಾಸ್ಕರ ನಾಯ್ಕ್.

ಇವರು ಈ ಶಾಲೆಯಲ್ಲಿ ಪಿ.ಟಿ. ಮಾಸ್ತ್ರು. ಅಂದರೆ ಶಾರೀರಿಕ ಶಿಕ್ಷಣದ ಶಿಕ್ಷಕ. ಪುಣಚ ಕಡೆಯ ಈ ಮಾಸ್ತ್ರೀಗೆ ಕೃಷಿಯಲ್ಲಿ ಆಸಕ್ತಿ. ಮನೆಯಲ್ಲೂ ತೋಟ ಉಂಟು. ಶಾಲೆಯನ್ನೂ ಹಸಿರಾಗಿಸಲು ಅವರು ಹೊರಟಾಗ ಬೆಂಬಲ ನೀಡಿದ್ದು ಇಡೀ ಶಿಕ್ಷಕ ಸಮೂಹ.

 

ಹಾಗೆ ಶಾಲಾ ಮಕ್ಕಳನ್ನು ಇದು ಯಾವ ಗಿಡ, ಹೇಗೆ ನೀರೆರೆಯಬೇಕು ಎಂಬ ಮಣ್ಣಿನ ಪಾಠವನ್ನು ಕಲಿಸುತ್ತಾ ಭಾಸ್ಕರ ನಾಯ್ಕ್ ಮಕ್ಕಳಿಂದ ನೆಡಿಸಿದ ಗಿಡ ಬೆಳೆದು ಮರವಾಗಿದೆ. ಆ ಮಕ್ಕಳೂ ಇವತ್ತು ಬೇರೆ ಬೇರೆ ಉದ್ಯೋಗದಲ್ಲಿದ್ದರೂ ಕೃಷಿಯ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದಾರೆ. ಶಾಲೆಯೂ ಅಷ್ಟೇ ತನ್ನ 80 ಸೆಂಟ್ಸ್ ಜಾಗವಿಡೀ ಕೈತೋಟ ಮಾಡಿಕೊಂಡಿದೆ. ಔಷಧೀಯ ಗಿಡಗಳು, ಹಣ್ಣು, ತರಕಾರಿ, ತೆಂಗು, ಕಂಗು ಹೀಗೆ ಅಪ್ಪಟ ತೋಟವೇ ಆಗಿದೆ.

ಶಾಲೆಯಲ್ಲಿ ಬೆಳಗ್ಗೆ ಅನ್ನಪೂರ್ಣ (ಸತ್ಯಸಾಯಿ ಟ್ರಸ್ಟ್ ಪ್ರವರ್ತಿತ) ಯೋಜನೆಯನ್ವಯ ಉಪಾಹಾರಕ್ಕೆ ತೋಟದ ವಸ್ತುಗಳು ಬಳಕೆಯಾಗುತ್ತವೆ. ಶಾಲೆಯ ತೋಟ ಮಕ್ಕಳಿಗೆ ಹೊಟ್ಟೆ ತುಂಬಾ ಸಮೃದ್ಧ ಸಾವಯವ ಊಟಕ್ಕೂ ಕಾರಣವಾಗಿದೆ. ಮಧ್ಯಾಹ್ನದೂಟಕ್ಕೆ ಸರಕಾರದ ಅಕ್ಕಿ, ಬೇಳೆಗಳೊಂದಿಗೆ ಶಾಲಾ ತೋಟದಲ್ಲಿ ಬೆಳೆದ ತೆಂಗಿನಕಾಯಿ, ತರಕಾರಿಗಳು, ಹಣ್ಣು ಹಂಪಲುಗಳು ಬೋನಸ್.

ಎಲ್ಲಿದೆ ಶಾಲೆ:

ಬಂಟ್ವಾಳ ತಾಲೂಕಿನ ಪೆರ್ಲಾಪು ಎಂಬಲ್ಲಿರುವ ಕನ್ನಡವನ್ನೇ ಕಲಿಸುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇದು.

ಈ ಪ್ರದೇಶದ ಸುತ್ತಮುತ್ತಲೂ ಹಸಿರು. ಹಾಗೆಯೇ ಶಾಲೆಯ ಆವರಣವೂ ಹಸಿರು. ಕಾಂಕ್ರೀಟ್ ಕಟ್ಟಡ, ಪೈಂಟುಗಳಿಂದ ವರ್ಣರಂಜಿತವಾಗಿ ಥಳಕು ತುಂಬಿದ ಶಾಲೆಗಳಿಂದ ಇದು ಭಿನ್ನ. ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ಇಲ್ಲಿ ಶಾಲಾ ಪಾಠದೊಂದಿಗೆ ಆಹ್ಲಾದಕರವಾದ ಹಸಿರಿನೊಂದಿಗೆ ಆಟ. ಅಕ್ಷರ ಕಲಿಕೆಯೊಂದಿಗೆ ಗಿಡ, ಮರಗಳಿಂದ ಕೂಡಿದೆ ಕೈತೋಟ.

ವಿಶೇಷವೆಂದರೆ, ಎಲ್ಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಕೊರಗಿದೆ. ಆದರೆ ಇಲ್ಲಿ ಹಾಗಲ್ಲ, ಕಳೆದ ವರ್ಷದ ಲೆಕ್ಕಾಚಾರಕ್ಕೆ ಹೋಲಿಸಿದರೆ, ಈ ವರ್ಷ ಮಕ್ಕಳ ಸೇರ್ಪಡೆ ಜಾಸ್ತಿ. 233 ಮಕ್ಕಳ ಸಮೃದ್ಧ ಶಾಲೆ ಇದು.

ಏನೇನಿದೆ:

ಇಲ್ಲಿ 70 ಅಡಕೆ ಗಿಡಗಳಿವೆ. ಔಷಧೀಯ ಸಸ್ಯಗಳ ಕೈತೋಟವೇ ಇದೆ. ಹಣ್ಣು, ತರಕಾರಿಗಳನ್ನು ಬೆಳೆಸಲಾಗುತ್ತದೆ. ಶಾಲೆಯ ಪರಿಸರ ಕ್ಲಬ್ ಸಹಿತ ಮಕ್ಕಳೆಲ್ಲರಿಗೂ ಇವುಗಳೊಂದಿಗೆ ಬೆರೆಯುವ ಸಂಭ್ರಮವನ್ನು ಶಿಕ್ಷಕರು ಕಲಿಸಿಕೊಟ್ಟಿದ್ದಾರೆ. ಕುಂಬಳ ಕಾಯಿ, ನುಗ್ಗೆ, ಸೋರೆಕಾಯಿಗಳನ್ನು ಮಕ್ಕಳು ಇಲ್ಲಿ ನೋಡಿ ಕಲಿಯುತ್ತಾರೆ.  ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ನಾಳೆ ಶಾಲೆಗೆ ಬರುವಾಗ ಹಣ್ಣು ತನ್ನಿ ಎಂಬ ಚೀಟಿ ಕೊಡಲಾಗುತ್ತದೆ. ಆದರೆ ಇಲ್ಲಿ ಹಾಗಲ್ಲ, ಶಾಲೆಯಲ್ಲೇ ಹಣ್ಣು, ತರಕಾರಿ ಬೆಳೆಸುವ ಕುರಿತು ಪಾಠ ಮಾಡಲಾಗುತ್ತದೆ. ಅವರಿಂದಲೇಕಟಾವು ಮಾಡಿಸಿ ಫಸಲು ಬೆಳೆಸಿದ ಮಕ್ಕಳಿಗೇ ನೀಡಿ ಅಡುಗೆ ತಯಾರಿಸಿಕೊಂಡು ಬಂದು ಶಾಲೆಯಲ್ಲಿ ಸವಿಯುವ ಅವಕಾಶ ನೀಡಲಾಗಿದೆ. ಸೊಪ್ಪು, ತರಕಾರಿಗಳನ್ನು ಅಡುಗೆಗೆ ಬಳಸುವುದಷ್ಟೇ ಅಲ್ಲ, ಅವುಗಳನ್ನು ಸಾವಯವ ವಿಧಾನದಲ್ಲಿ ಬೆಳೆಸುವುದು ಹೇಗೆ ಎಂಬುದನ್ನೂ ಮಕ್ಕಳು ಕಲಿಯುತ್ತಿದ್ದಾರೆ.

ಶಾಲೆಯ ಕೈತೋಟದಲ್ಲಿ ಬೆಳೆಯುವ ಯಾವುದೇ ತರಕಾರಿಗಳಿಗೆ ಕ್ರಿಮಿನಾಶಕ ಬಳಸದೇ ಕೇವಲ ಎಲೆಗೊಬ್ಬರ  ಮಾತ್ರ ಬಳಸಲಾಗುತ್ತಿದೆ. ಇದರ ಜೊತೆಗೆ ತೋಟದಲ್ಲಿ ಪ್ರತ್ಯೇಕವಾಗಿ ಔಷಧಿ ವನವನ್ನೂ ನಿರ್ಮಿಸಲಾಗಿದ್ದು, ಇಲ್ಲಿ ಸಾಕಷ್ಟು ಬಗೆಯ ಔಷಧೀಯ ಗಿಡವನ್ನು ನೆಟ್ಟು ಮಕ್ಕಳಿಗೆ ಅದರ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ.

ಸರಕಾರಿ ಶಾಲೆ ಎಂದರೆ ಮೂಗುಮುರಿಯುವವರು, ಕನ್ನಡ ಮಾಧ್ಯಮ ಶಾಲೆ ಎಂದರೆ ಎರಡನೇ ದರ್ಜೆ ಎಂದು ಭಾವಿಸುವವರು ಇಲ್ಲಿಗೊಮ್ಮೆ ಭೇಟಿ ನೀಡಬೇಕು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ