ಕಾಂಗ್ರೆಸ್ ನ ಹಿರಿಯ ಮುಖಂಡ ಜಾಫರ್ ಶರೀಫ್ ಇನ್ನಿಲ್ಲ. ಭಾರತೀಯ ರೈಲ್ವೆ ಇತಿಹಾಸದಲ್ಲಿ ಜಾಫರ್ ಶರೀಫ್ ಹೆಸರು ಸುಧಾರಣೆಯ ಸಂದರ್ಭ ಕೇಳಿಬರುವ ಮುಂಚೂಣಿಯ ಹೆಸರು. ವಿಶೇಷವಾಗಿ ಮೀಟರ್ ಗೇಜ್ ಅನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಿದ ರೈಲ್ವೆ ಸಚಿವರೆಂಬ ಹೆಗ್ಗಳಿಕೆ ಅವರದ್ದು. ಕರ್ನಾಟಕಕ್ಕೂ ಶರೀಫ್ ಕಾಲದಲ್ಲಿ ಹಲವು ರೈಲ್ವೆ ಯೋಜನೆಗಳು ಬಂದಿದ್ದವು.
ಹಿಂದೆ ಅವರು ರೈಲ್ವೆ ಸಚಿವರಾಗಿದ್ದಾಗ ಮೀಟರ್ ಗೇಜ್ ಮಾರ್ಗಗಳನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸಿದ್ದು ಹಾಗೂ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳನ್ನು ಪೂರ್ತಿಗೊಳಿಸಿದ್ದು, ಕರ್ನಾಟಕದ ಮಟ್ಟಿಗೆ ಹಲವು ಕೊಡುಗೆಗಳನ್ನು ನೀಡಿದ್ದು ಅವರ ಸಾಧನೆಗಳ ಪಟ್ಟಿಯಲ್ಲಿ ಸೇರುತ್ತದೆ.
ಪಿ.ವಿ.ನರಸಿಂಹರಾವ್ ಅವರ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಅವರು ರಾಜ್ಯಕ್ಕೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದರು. ಬೆಂಗಳೂರಿನ ಯಲಹಂಕದ ಬಳಿ ರೈಲ್ವೆಯ ಗಾಲಿ ಮತ್ತು ಅಚ್ಚು ತಯಾರಿಕಾ ಘಟಕ ಸ್ಥಾಪನೆ ಮಾಡುವಲ್ಲಿ ಅವರ ಪಾತ್ರ ಅತ್ಯಂತ ಹಿರಿದಾದುದು.
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಕಾಲದಿಂದಲೂ ಗಾಂಧಿ ಕುಟುಂಬಕ್ಕೆ ನಿಷ್ಠಾವಂತರಾಗಿದ್ದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು ಐದು ಬಾರಿ ಇಲ್ಲಿಂದ ಗೆದ್ದಿದ್ದರು. 1933 ನವೆಂಬರ್ 3ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಜನಿಸಿದ್ದ ಜಾಫರ್ ಷರೀಫ್ 2004ರಲ್ಲಿ ಸೋತ ನಂತರ ರಾಜಕೀಯದಿಂದಲೇ ತೆರೆಮರೆಗೆ ಸರಿದಿದ್ದರು. 2004ರಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಪಿ.ಸಾಂಗ್ಲಿಯಾನ ಎದುರು ಪರಾಭವಗೊಂಡರು.