ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಸೇರ್ಪಡೆಗಾಗಿ ಮಾಡುತ್ತಿರುವ ಬೇಡಿಕೆಗೆ ದುಬೈಯಲ್ಲಿ ನಡೆದಿರುವ ವಿಶ್ವ ತುಳು ಸಮ್ಮೇಳನ ಹೆಚ್ಚಿನ ಬಲವನ್ನು ನೀಡಿದೆ ಎಂದು ಸಚಿವೆ ಡಾ.ಜಯಮಾಲ ಅವರು ಹೇಳಿದ್ದಾರೆ.
ದುಬೈಯ ಅಲ್ ನಾಸಿರ್ ಒಳಾಂಗಣ ಕ್ರೀಡಾಂಗಣದ ರಾಣಿ ಅಬ್ಬಕ್ಕ ಚಾವಡಿಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ತುಳುವರ ಬೇಡಿಕೆಗೆ ತುಳುನಾಡಿನಲ್ಲಿ ನಡೆದ ಅನೇಕ ಸಮ್ಮೇಳನಗಳು ಧ್ವನಿಯನ್ನು ಎತ್ತಿವೆ. ಈ ಧ್ವನಿ ಈಗ ಕಡಲಾಚೆಯ ಕೊಲ್ಲಿ ದೇಶದಲ್ಲೂ ಮಾರ್ಧನಿಸಿದೆ. ಈ ಸಮ್ಮೇಳನದಲ್ಲಿ
ಸೇರಿರುವ ಬಾರೀ ಸಂಖ್ಯೆಯ ತುಳುವರ ಉತ್ಸಾಹ ನೋಡಿದಾಗ ಖಂಡಿತವಾಗಿಯೂ ತಾಯ್ನಾಡಿನ ತುಳುವರ ಬೇಡಿಕೆಗೆ ಮತ್ತಷ್ಟು ಶಕ್ತಿ ಬಂದಿದೆ ಎಂದು ಡಾ.ಜಯಮಾಲ ಅವರು ಅಭಿಪ್ರಾಯ ಪಟ್ಟರು.
ತುಳು ಭಾಷೆಗೆ ಸಂವಿಧಾನದ ಮಾನ್ಯತೆ ನೀಡುವ ವಿಚಾರದಲ್ಲಿ ಉಂಟಾಗಿರುವ ವಿಳಂಬದ ಬಗ್ಗೆ ವಸ್ತು ನಿಷ್ಟವಾಗಿ ಚರ್ಚೆಯಾಗಬೇಕಾಗಿದೆ ಜೊತೆಗೆ ಪಕ್ಷಾತೀತ ನೆಲೆಯಲ್ಲಿ ಆಗ್ರಹದ ಧ್ವನಿಯನ್ನು ಇಮ್ಮಡಿಗೊಳಿಸಬೇಕಾಗಿದೆ ಎಂದು ಸಚಿವೆ ಡಾ.ಜಯಮಾಲ ಹೇಳಿದರು.
ತುಳು ಭಾಷೆ ಹಾಗೂ ಸಂಸ್ಕೃತಿ ಸ್ವತಂತ್ರ ನೆಲೆಯಾಗಿರುವಂತಹದು, ತಳು ಭಾಷೆ ಯಾವುದೇ ಭಾಷೆಯ ಉಪ ಭಾಷೆಯಲ್ಲ. ,ತುಳು ಪ್ರಧಾನ ಭಾಷೆ ಹಾಗೂ ತುಳು ಸಂಸ್ಕೃತಿ ಪ್ರಧಾನ ಸಂಸ್ಕೃತಿಯಾಗಿದೆ . ತಾಯ್ನಾಡಿನಲ್ಲಿ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ತುಳು ಭಾಷಿಗರು ನೆಲೆಸಿದ್ದಾರೆ , ತುಳು ಭಾಷೆಯನ್ನು ಪಸರಿಸುತ್ತಿದ್ದಾರೆ ಅನ್ನುವ ವಿಚಾರವನ್ನು ಕೇಂದ್ರ ಸರಕಾರ ಗಮನಿಸಬೇಕಾಗಿದೆ ಎಂದು ಡಾ.ಜಯಮಾಲ ಅಭಿಪ್ರಾಯ ಪಟ್ಟರು.
ದುಬೈಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನವು ತುಳುವರಿಗೆ ಹಾಗೂ ತುಳು ಭಾಷೆಗೆ ವಿಶ್ವ ಮಾನ್ಯತೆಯನ್ನು ತಂದು ಕೊಟ್ಟಿದೆ ಎಂದು ಡಾ.ಜಯಮಾಲ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಕೊಲ್ಲಿ ರಾಷ್ಟ್ರದಲ್ಲಿ ತಮ್ಮ ದುಡಿಮೆಯ ಶ್ರಮದ ಜೊತೆಗೆ ಭಾಷಾ ಪ್ರೇಮವನ್ನು ಎತ್ತಿ ಹಿಡಿದಿರುವ ತುಳು ಸಂಘಟಕರನ್ನು ಸಚಿವೆ ಡಾ.ಜಯಮಾಲ ಅವರು ಅಭಿನಂದಿಸಿದರು.