ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಇದರ ಬಂಟ್ವಾಳ ಕ್ಷೇತ್ರ ಸಮಿತಿಯ ಮಹಾಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ನ.25ರಂದು ಭಾನುವಾರ ಬಿ.ಸಿ.ರೋಡಿನ ಲಯನ್ಸ್ ಕ್ಲಬ್‌ನಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಎಸೋಸಿಯೇಷನ್‌ನ ರಾಜ್ಯ ಸಮಿತಿ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್ ತಿಳಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಈಶ್ವರ್ ಕುಲಾಲ್ ಅಧ್ಯಕ್ಷತೆ ವಹಿಸಲಿದ್ದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ರಾಜ್ಯ ಸಮಿತಿ ಅಧ್ಯಕ್ಷ ಕೆ.ಎಸ್. ಆನಂದ ಪ್ರಾಸ್ತವಿಕ ಭಾಷಣ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಸಂತ, ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ಶಾಸಕರು, ತಹಶೀಲ್ದಾರ್ ಮತ್ತು ಏಳು ವಲಯದ ಹಿರಿಯ ವೃತ್ತಿ ಬಾಂಧವರನ್ನು ಗೌರವಿಸಿ ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಸಾಮಾಜಿಕ ಭದ್ರತೆ ಇಲ್ಲ:
ರಾಜ್ಯಾದ್ಯಂತ 10 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ಹೊಲಿಗೆ ವೃತ್ತಿಯವರಿಗೆ ಯಾವುದೇ ಸಾಮಾಜಿಕ ಭದ್ರತೆಯಿಲ್ಲದೇ ಇದ್ದು ದರ್ಜಿಗಳ ಮೂಲಭೂತ ಅಗತ್ಯತೆಗಳನ್ನು ಈಡೇರಿಸುವಲ್ಲಿ ಸರಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ ಅವರು ನೆರೆಯ ಕೇರಳ ರಾಜ್ಯದಲ್ಲಿರುವಂತೆ ಟೈಲರಿಂಗ್ ವರ್ಕರ್ಸ್ ವೆಲ್‌ಫೇರ್ ಫಂಡ್ ಬೋರ್ಡು ಸ್ಥಾಪಿಸಿ ಆ ಮೂಲಕ ಹೊಲಿಗೆ ಕೆಲಸಗಾರರಿಗೆ ಕ್ಷೇಮನಿಧಿ, ಕುಟುಂಬ ಪಿಂಚಣಿ, ಹೆರಿಗೆ ಭತ್ಯೆ, ಅಪಘಾತ ಪರಿಹಾರ, ವಿದ್ಯಾರ್ಥಿ ವೇತನ, ವಿವಾಹ ಧನ ಸೌಲಭ್ಯಗಳನ್ನು ನೀಡಬೇಕೆನ್ನುವುದು ಕೆಎಸ್‌ಟಿಎಯ ಬಹುಕಾಲದ ಬೇಡಿಕೆಯಾಗಿದೆ ಎಂದರು.
ಬಡತನ, ಶಿಕ್ಷಣದ ಕೊರತೆಯಿಂದ ಉಪಮಾರ್ಗವಾಗಿ ಹೊಲಿಗೆ ವೃತ್ತಿಯನ್ನು ಅವಲಂಭಿಸಿದವರೇ ಹೆಚ್ಚು, ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿರುವ ಕಡಿಮೆ ಗುಣಮಟ್ಟ ಹಾಗೂ ಅಲ್ಪ ಬಾಳಿಕೆಯ ಬಟ್ಟೆಗಳಿಂದಾಗಿ ದರ್ಜಿ ವೃತ್ತಿಯನ್ನು ಅವಲಂಬಿಸಿದವರಿಗೆ ತೀರಾ ಕೆಡುಕುಂಟಾಗಿದೆ. ಕುಳಿತು ಮಾಡುವ ಕೆಲಸದಿಂದಾಗಿ ದೇಹಕ್ಕೆ ಸರಿಯಾದ ವ್ಯಾಯಮ ಇಲ್ಲದೆ ಅನಾರೋಗ್ಯಗಳು ದರ್ಜಿ ವೃತ್ತಿಯವರನ್ನು ಸುಲಭವಾಗಿ ಆವರಿಸಿಕೊಳ್ಳುತ್ತಿದೆ ಇಷ್ಟು ಸವಾಲುಗಳ ಮಧ್ಯೆ ವೃತ್ತಿ ನಿರತ ದರ್ಜಿಗಳಿಗೆ ಕನಿಷ್ಟ ಸೌಲಭ್ಯವನ್ನು ಒದಗಿಸುವ ವಿಷಯದಲ್ಲಿ ಸರಕಾರ ಸೋತಿದೆ ಎಂದು ಅವರು ಆರೋಪಿಸಿದರು.
ವಿವಿಧ ಅವಧಿಯಲ್ಲಿ ಸರಕಾರ ಜಾರಿಗೆ ತಂದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಪ್ರೊವಿಡೆಂಟ್ ಫಂಡ್ ಜಾರಿ, ಸ್ಮಾರ್ಟ್ ಕಾರ್ಡ್ ಯೋಜನೆ, ಅಂಬೇಡ್ಕರ್ ಸಹಾಯ ಹಸ್ತ ಯೋಜನೆಗಳು ಸರಿಯಾಗಿ ಅನುಷ್ಠಾನವಾಗದೆ ಟೈಲರ್‍ಸ್‌ಗಳ ಬೇಡಿಕೆಗೆ ಸರಕಾರ ಆಲಸ್ಯ ವಹಿಸಿರುವುದರಿಂದ ರಾಜ್ಯ ಸಮಿತಿಯ ಜೊತೆ ಸೇರಿಕೊಂಡು ಹೋರಾಟ ನಡೆಸುವುದಾಗಿ ಅವರು ಈ ಸಂದರ್ಭ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಈಶ್ವರ್ ಕುಲಾಲ್, ಕಾರ್ಯದರ್ಶಿ ಎಂ.ನಾಗೇಶ್, ಕೋಶಾಧಿಕಾರಿ ಯಾದೇಶ್ ತುಂಬೆ, ಜಿಲ್ಲಾ ಸಮಿತಿ ಸದಸ್ಯ ಸತೀಶ್, ಸುರೇಶ್ ಹಾಜರಿದ್ದರು.