ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಶಾಲಾ ಮಕ್ಕಳಿಗೆ ಟೆಲಿಸ್ಕೋಪ್ ಮೂಲಕ ಬಾಹ್ಯಾಕಾಶ ದರ್ಶನ ಮಾಡಿಸುವ ಕಾರ್ಯಕ್ರಮ ಬಂಟ್ವಾಳ ಎಸ್.ವಿ.ಎಸ್. ಟೆಂಪಲ್ ಸ್ಕೂಲ್ ಹೊರಾಂಗಣ ಮೈದಾನದಲ್ಲಿ ಬುಧವಾರ ರಾತ್ರಿ ನಡೆಯಿತು.
ಬೆಂಗಳೂರಿನ ಆರ್ಯಭಟ ಮೊಬೈಲ್ ಪ್ಲೆನೆಟೋರಿಯಂನ ಸತೀಶ್ ಮತ್ತು ರೋಹಿತ್ ಸೇರಿದ್ದ ಶಾಲಾ ಮಕ್ಕಳು, ಅಧ್ಯಾಪಕರಿಗೆ ಚಂದ್ರ, ಮಂಗಳ ಗ್ರಹಗಳನ್ನು ಟೆಲಿಸ್ಕೋಪ್ ಮೂಲಕ ನೋಡಲು ಕಲಿಸಿದರು. ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ, ಮೇಧಾ ಆಚಾರ್ಯ, ರಾಮಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದ್ದು, ಡಿ.5ರವರೆಗೆ ತಾಲೂಕಿನ ನಾನಾ ಶಾಲೆಗಳಲ್ಲಿ ಟೆಲಿಸ್ಕೋಪ್ ಮೂಲಕ ಬಾಹ್ಯಾಕಾಶ ನೋಡಲು ಕಲಿಸುವ ಕಾರ್ಯಕ್ರಮ ಇದಾಗಲಿದೆ. ಮುಂದಿನ ದಿನಗಳಲ್ಲಿ ಟೆಲಿಸ್ಕೋಪ್ ಮೂಲಕ ಚಂದ್ರನನ್ನು ಹಾಗೂ ಆಕಾಶದಲ್ಲಿರುವ ಗ್ರಹಗಳನ್ನು ವಿಶಿಷ್ಠ ರೀತಿಯಲ್ಲಿ ಪ್ರದರ್ಶಿಸುವ ಇರಾದೆ ಕ್ಲಬ್ ಗಿದೆ ಎಂದು ಮಂಜುನಾಥ ಆಚಾರ್ಯ ಈ ಸಂದರ್ಭ ತಿಳಿಸಿದರು. ಇದೇ ವೇಳೆ ಆರ್ಯಭಟ ಸಂಸ್ಥೆ ಮೂಲಕ ತ್ರಿಡಿ ತಾರಾಲಯ ಪ್ರದರ್ಶನದ ಎರಡನೇ ಸುತ್ತಿನ ಕಾರ್ಯಕ್ರಮಗಳು ಶಾಲೆಯಲ್ಲಿ ಆರಂಭಗೊಂಡವು.
ಬಾಹ್ಯಾಕಾಶದಲ್ಲೇನಿದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಭೂಮಂಡಲ, ನಭೋಮಂಡಲದ ಕೌತುಕಗಳನ್ನು ವೀಕ್ಷಿಸುವ ಆಸಕ್ತಿ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇರುತ್ತದೆ. ಆದರೆ ತಿಳಿಯಲು ಎಲ್ಲಿಗೆ ಹೋಗಬೇಕು ಎಂಬ ಸಮಸ್ಯೆ. ಇದನ್ನು ಮನಗಂಡು ಬಂಟ್ವಾಳದ ರೋಟರಿ ಕ್ಲಬ್ ಬಂಟ್ವಾಳ ತಾರಾಲಯದ ವಿಸ್ಮಯಗಳನ್ನು ಶಾಲಾ ಮಕ್ಕಳಿಗೆ ಒದಗಿಸುವ ಪ್ರಯತ್ನವನ್ನು ಕಳೆದ ಸೆಪ್ಟೆಂಬರ್ ನಲ್ಲಿ ಮಾಡಿತ್ತು. ಇದಕ್ಕೆ ಉತ್ತಮ ಸ್ಪಂದನೆ ದೊರಕಿದ ಕಾರಣ ಎರಡನೇ ಸುತ್ತಿನ ಪ್ರದರ್ಶನವನ್ನು ಶಾಲೆಗಳಲ್ಲಿ ಏರ್ಪಡಿಸಲಾಗುತ್ತಿದೆ. ರೋಟರಿ ಕ್ಲಬ್ ಬಂಟ್ವಾಳದ ಸುವರ್ಣ ವರ್ಷಾಚರಣೆ ಪ್ರಯುಕ್ತ ಈ ಅವಕಾಶ ಶಾಲೆ ಮಕ್ಕಳಿಗೆ ಲಭ್ಯವಾಗುತ್ತಿದೆ.