ದೇಶ ಎನ್ನುವುದು ಬರೇ ಭೌಗೋಳಿಕ ನೆಲೆಯಲ್ಲ. ಈ ದೇಶಕ್ಕೆ ಐಕ್ಯತೆ, ಸಮಗ್ರತೆ, ಶಾಂತಿ ಸೌಹಾರ್ದತೆಯ ನೆಲೆಗಟ್ಟಿನಲ್ಲಿ ನಿಂತ ಭವ್ಯ ಪರಂಪರೆ ಇದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳನ್ನು ಉಳಿಸಿಕೊಂಡು ಜಾತ್ಯಾತೀತ ರಾಷ್ಟ್ರ ನಿರ್ಮಾಣವಾಗಬೇಕು. ಆ ಮುಖೇನ ಸಂವಿಧಾನ ಬದಲಿಸಲು ಹೊರಟವರಿಗೆ ತಕ್ಕ ಪಾಠ ಕಲಿಸಲು ಯುವಜನತೆ ಮುಂದಾಗಬೇಕಿದೆ. ಸಂವಿಧಾನದ ರಕ್ಷಣೆ ಹೊಣೆಗಾರಿಕೆ ಯುವಜನರ ಮೇಲಿದೆ ಎಂದು ಅಖಿಲ ಭಾರತ ಯುವಜನ ಫೆಡರೇಶನ್ ಸಂಚಾಲಕ ಎಚ್ ಎಂ ಸಂತೋಷ್ ಅಭಿಪ್ರಾಯಪಟ್ಟರು.
ಬಿಸಿರೋಡು ರಿಕ್ಷಾ ಭವನದಲ್ಲಿ ಅಖಿಲ ಭಾರತ ಯುವಜನ ಫೆಡರೇಶನ್ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಜರುಗಿದ ಯುವಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುತ್ತೇವೆಂದು ಯುವಜನರನ್ನು ನಂಬಿಸಿ ಮೋಸ ಮಾಡಿದೆ.ಕಪ್ಪು ಹಣ ತರುವ ಭರವಸೆಗಳು, ಪ್ರತಿಯೊಬ್ಬ ಭಾರತೀಯನ ಖಾತೆಗೆ ೧೫ ಲಕ್ಷ ಹಾಕುವ ಆಶ್ವಾಸನೆಗಳು, ಭ್ರಷ್ಟಾಚಾರ ತಡೆಯುವ ಘೋಷಣೆಗಳೆಲ್ಲವೂ ಹುಸಿಯಾಗಿವೆ. ನೋಟು ರದ್ಧತಿ, ಸರಕು ಮತ್ತು ಸೇವಾ ತೆರಿಗೆ ಗಳಂತಹ ಮೂರ್ಖ ನಿರ್ಧಾರಗಳಿಂದ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬರೇ ಜನಪ್ರಿಯ ಹೇಳಿಕೆಗಳಿಂದಲೇ ಜನರನ್ನು ದಾರಿ ತಪ್ಪುವ ಪ್ರಯತ್ನ ಮೋದಿ ಸರ್ಕಾರದಿಂದ ಆಗುತ್ತಿದೆ. ಇದನ್ನು ಯುವಜನರು ಅರ್ಥ ಮಾಡಿಕೊಳ್ಳಬೇಕು. ದೇಶದ ಸ್ವಾಯತ್ತ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ತನಗೆ ಬೇಕಾದಂತೆ ಬಳಸಿಕೊಳ್ಳಲಾಗುತ್ತಿದೆ.ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣ ಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ಪ್ರಜಾಪ್ರಭುತ್ವ ತೀರಾ ಅಪಾಯದಲ್ಲಿದ್ದು ಯುವಜನತೆ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಸದಸ್ಯ ಎ. ಗೋಪಾಲ ಅಂಚನ್ ” ಯುವಜನತೆ, ವೈಚಾರಿಕೆ, ಮಾನೀಯತೆ” ವಿಷಯದಲ್ಲಿ ಮಾತನಾಡಿ ನಮ್ಮ ನಮ್ಮ ನೆಲದ ಸಂಸ್ಕ್ರತಿ, ಆರಾದನಾ ಕ್ರಮಗಳು, ಇತಿಹಾಸವನ್ನು ತಿರುಚಿ ಯುವಜನತೆಯನ್ನು ವಂಚಿಸಲಾಗುತ್ತಿದೆ. ಧರ್ಮ, ದೇವರು, ನಂಬಿಕೆಯ ಹೆಸರಲ್ಲಿ ಮೌಢ್ಯವನ್ನು ಬಿತ್ತುವ ಜತೆಯಲ್ಲಿ ಯುವಕರನ್ನು ಸಂಘರ್ಷದ ಹಾದಿಗೆ ತಳ್ಳಲಾಗುತ್ತಿದೆ. ಸಂಸ್ಕೃತಿ ಯ ಬಗ್ಗೆ ಮಾತಾಡುವವರಿಂದಲೇ ಸಂಸ್ಕೃತಿ ಯ ಕಗ್ಗೊಲೆಯಾಗುತ್ತಿದೆ. ವೈಚಾರಿಕತೆಯ ಬಗ್ಗೆ ಮಾತಾಡಿದರೆ ಧರ್ಮ ವಿರೋಧಿಗಳೆಂದು ಹಲ್ಲೆ ನಡೆಸಲಾಗುತ್ತಿದೆ. ಮಾನವೀಯತೆಯ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಎಂದು ಬಿಂಬಿಸಲಾಗುತ್ತದೆ. ಜನರ ಹಕ್ಕು ಮತ್ತು ಸ್ವಾತಂತ್ರ ವನ್ನು ಕಸಿದು ಕೊಳ್ಳಲಾಗುತ್ತಿರುವ ಈ ಯುವಜನರು ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯನ್ನು ಬೆಳೆಸಿಕೊಂಡು ಮಾನವೀಯತೆ ಮತ್ತು ಸಂವಿಧಾನ ಉಳಿವಿಗೆ ಪಣತೊಡಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಎಐವೈಫ್ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಬಿ.ಶೇಖರ್ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯನ್, ಸಂಘಟನೆಯ ಜಿಲ್ಲಾ ನಾಯಕರಾದ ಎಂ.ಕರುಣಾಕರ, ಪ್ರೇಮನಾಥ. ಕೆ. , ಶ್ರೀನಿವಾಸ ಭಂಡಾರಿ ಉಪಸ್ಥಿತರಿದ್ದರು. ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ನಿರೂಪಿದರು. ಪ್ರೇಮನಾಥ ಕೆ ವಂದಿಸಿದರು.