ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ, ಬಂಟ್ವಾಳ ಶಾಖಾ ಗ್ರಂಥಾಲಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಬಂಟ್ವಾಳ ತಾಪಂ ಎಸ್.ಜಿ.ಎಸ್.ವೈ. ತರಬೇತಿ ಕೇಂದ್ರ ಸಭಾಂಗಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಗ್ರಂಥಾಲಯ ಸದಸ್ಯತ್ವ ಆಂದೋಲನ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಪುಸ್ತಕ ಪ್ರದರ್ಶನವನ್ನು ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ, ಯುವ ಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಹಾಗೂ ಆರೋಗ್ಯಕರ ಚಿಂತನೆಗಳನ್ನು ನೀಡಬೇಕಾಗಿದೆ. ಬದಲಾದ ಸನ್ನಿವೇಶದಲ್ಲಿ ಓದುಗರ ಕೊರತೆಯಾಗಿಲ್ಲ, ಅವರೆಲ್ಲರೂ ಡಿಜಿಟಲ್ ಮಾಧ್ಯಮಗಳ ಮೂಲಕ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಆದರೆ ಪುಸ್ತಕಗಳನ್ನು ಓದುವುದರಿಂದ ಸಿಗುವ ಲಾಭವೇ ಬೇರೆ ಎಂದರು.
ಈ ಸಂದರ್ಭ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ಇಂದು ಪುಸ್ತಕ ಕೊಳ್ಳಲು ನಾವು ಹಿಂದೇಟು ಹಾಕುತ್ತೇವೆ. ಆದರೆ ಹೋಟೆಲ್ ಇತ್ಯಾದಿಗಳಿಗೆ ಹಣ ವ್ಯಯಿಸಲು ಹಿಂದೆ ಮುಂದೆ ನೋಡುವುದಿಲ್ಲ. 100 ರೂಪಾಯಿಗೆ ನೋಬೆಲ್ ಪ್ರಶಸ್ತಿ ಪುರಸ್ಕೃತರ ಕೃತಿ ದೊರಕುತ್ತದೆ. ಪುಸ್ತಕಗಳ ಓದುವಿಕೆ ನಮಗೆ ಮಾನವತೆ, ಹೃದಯವಂತಿಕೆ, ಪ್ರೀತಿಯನ್ನು ಕಲಿಸುತ್ತದೆ. ಆಧುನಿಕ ತಂತ್ರಜ್ಞಾನ ನಮಗೆ ವಿವರಗಳನ್ನಷ್ಟೇ ನೀಡಬಹುದು, ಮಾಹಿತಿ ಒದಗಿಸಬಹುದು. ಆದರೆ ಹೃದಯವಂತಿಕೆ, ಪ್ರೀತಿ, ಮನುಷ್ಯತ್ವವನ್ನು ಗ್ರಂಥಾಲಯಗಳು ಒದಗಿಸುತ್ತವೆ ಎಂದು ಹೇಳಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾತನಾಡಿ ಪ್ರತಿ ಶಾಲೆಗಳಲ್ಲಿರುವ ಕಪಾಟುಗಳ ಒಳಗಿರುವ ಪುಸ್ತಕಗಳನ್ನು ಮಕ್ಕಳು ಓದಬೇಕು, ಇಲಾಖೆ ವತಿಯಿಂದ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ಮಾತನಾಡಿದರು. ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಹಿಸಿದ್ದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಮಮತಾ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ನಮಿತಾ, ಇಲಾಖೆಯ ಪ್ರಣೀತಾ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ನಾನಾ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರಾದ ಮಾನಸಾ, ಜಯಲಕ್ಷ್ಮೀ, ವಿಮಲಾ, ಜಯಲಕ್ಷ್ಮೀ, ಗುಣವತಿ, ಜಯಂತಿ, ಉಮಾವತಿ ಅವರನ್ನು ಗೌರವಿಸಲಾಯಿತು.