ತೌಳವ ಸಂಸ್ಕೃತಿಯ ಸೊಗಡನ್ನು ಇಂದಿಗೂ ತನ್ನ ಮೈಮನಮನೆಗಳಲ್ಲಿ ಮೈಗೂಡಿಸಿಕೊಂಡಿರುವ ತುಳುನಾಡಿನ ಶ್ರೇಷ್ಠ ಜಾನಪದ ಕಲಾವಿದೆ ಶಾರದಾ ಜಿ.ಬಂಗೇರಾ ದೇಸಿ ಸಂಸ್ಕೃತಿಯ ಜ್ಞಾನ ಭಂಡಾರವಾಗಿದ್ದಾರೆ. ಇಂತಹ ಕಲಾವಿದೆಯನ್ನು ಗುರುತಿಸಿ, ಗೌರವಿಸಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಾರ್‍ಯ ಶ್ಲಾಘನೀಯವಾದುದು ಎಂದು ಉಪನ್ಯಾಸಕ, ಲೇಖಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಕ್ಷೇತ್ರದ ಸಾಧಕರಿಗೆ ಕೊಡಮಾಡುವ “ಚಾವಡಿ ತಮ್ಮನ” ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆ ನಿವಾಸಿ, ಹಿರಿಯ ಜಾನಪದ ಕಲಾವಿದೆ ಶಾರದಾ ಜಿ.ಬಂಗೇರ ಅವರಿಗೆ ಮಂಗಳೂರು ಉರ್ವಸ್ಟೋರ್‌ನಲ್ಲಿರುವ ಅಕಾಡೆಮಿಯ ತುಳುಭವನದ “ಸಿರಿಚಾವಡಿ”ಯಲ್ಲಿ ಶನಿವಾರ ನಡೆದ “ಚಾವಡಿ ತಮ್ಮನ” ಕಾರ್‍ಯಕ್ರಮದಲ್ಲಿ ಶಾರದಾ ಜಿ.ಬಂಗೇರ ಅವರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು.
ಒಂದೇ ವೇದಿಕೆಯಲ್ಲಿ ಹತ್ತಾರು ಸಾಧಕರನ್ನು ಕುಳ್ಳಿರಿಸಿ ಆ ಸಾಧಕರ ಬಗ್ಗೆ ಒಂದೆರೆಡು ನಿಮಿಷದ ಮಾತುಗಳನ್ನಾಡಿ ಸನ್ನಾನಿಸುವ ಪರಂಪರೆಯ ಬದಲಾಗಿ ಒಂದೇ ಸಾಧಕರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಅವರ ಸಾಧನೆಯ ಬಗ್ಗೆ ಅವಲೋಖನ ನಡೆಸುವ ತುಳು ಸಾಹಿತ್ಯ ಅಕಾಡೆಮಿಯ ಈ ಕಾರ್‍ಯ ಸ್ತುತ್ಯಾರ್ಹವಾದುದು. ಬಾಲ್ಯದ ಬದುಕಿನಲ್ಲಿ ಹಿರಿಯರ ಆಚಾರ ವಿಚಾರಗಳು ಶಾರದಾ ಅವರ ಮೆಲೆ ಪ್ರಬಾವ ಬೀರಿದೆ. ಗದ್ದೆಯಲ್ಲಿನ ದುಡಿಮೆಯೇ ಅವರಿಗೆ ತುಳುವ ಸಂಸ್ಕೃತಿಯನ್ನು ಕಲಿಸಿಕೊಟ್ಟಿದೆ. ಅವರ ಎಲ್ಲಾ ಕಬಿತೆ. ಉರಲ್, ಸಂದಿ, ಪಾರ್‍ದನಗಳಲ್ಲಿ ಸ್ತ್ರೀಯರ ನೋವು, ಸಂಕಟ, ಸಮಸ್ಯೆಗಳು ಮೇಳೈಯಿಸುತ್ತಿದ್ದು ಇವೆಲ್ಲವೂ ಮುದ್ರಿತವಾಗಿ ಮುಂದಿನ ಜನಾಂಗಕ್ಕೆ ತಲುಪಬೇಕಾದ ಅಗತ್ಯವಿದೆ. ಕಳೆದ ನಲ್ವತ್ತು ವರ್ಷಗಳ ಹಿಂದೆ ಕಾಣುತ್ತಿದ್ದ ತುಳುನಾಡಿನ ಆಚಾರ ವಿಚಾರಗಳನ್ನು ಇಂದಿಗೂ ಶಾರದಾ ಅವರ ಮನೆಯಲ್ಲಿ ಕಾಣಲು ನನಗೆ ಈ ಮೂಲಕ ಅವಕಾಶವಾಗಿದೆ ಎಂದು ರಝಾಕ್ ಹೇಳಿದರು.
ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ತುಳು ಸಾಹಿತ್ಯ ಅಕಾಡೆಮಿಯು ಪ್ರಸ್ತುತ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಈ ನಿಟ್ಟಿನಲ್ಲಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ ಚಾವಡಿ ತಮ್ಮನವು ಒಂದಾಗಿದ್ದು ತುಳು ಬಾಷೆ, ಸಂಸ್ಕೃತಿ ವಿಚಾರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್‍ಯವನನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ ಸನ್ಮಾನಿಸಿದರು. ಗ್ರಾಮೀಣ ಪ್ರದೇಶದಲ್ಲಿರುವ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಸಾಧಕರನ್ನು ಗುರುತಿಸುವ ಕಾರ್‍ಯ ಸ್ವಾಗತಾರ್ಹವಾದುದು ಎಂದರು. ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ ಬಿ., ಸದಸ್ಯರಾದ ಡಾ.ವೈ.ಎನ್.ಶೆಟ್ಟಿ, ಶಿವಾನಂದ ಕರ್ಕೆರ, ಪ್ರಭಾಕರ ನೀರುಮಾರ್ಗ, ಸುಧಾ ನಾಗೇಶ್, ವಿದ್ಯಾಶ್ರೀ ಉಪಸ್ಥಿತರಿದ್ದರು. ಕಾರ್‍ಯಕ್ರಮದ ಸದಸ್ಯ ಸಂಚಾಲಕ ಎ.ಗೋಪಾಲ ಅಂಚನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ಡಾ.ವಾಸುದೇವ ಬೆಳ್ಳೆ ಕಾರ್‍ಯಕ್ರಮ ನಿರೂಪಿಸಿದರು. ಸದಸ್ಯ ಬೆನೆಟ್ ಅಮ್ಮಣ್ಣ ವಂದಿಸಿದರು. ಇದೇ ಸಂದರ್ಭ ತುಳು ಲಿಪಿ ಹಾಗೂ ತುಳು ಬಾಷೆ ಕಲಿತ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.