ಗೋಲ್ಡನ್ ಸ್ಟಾರ್ ಗಣೇಶ್ ಅವರ ನೇತೃತ್ವದಲ್ಲಿ ನಡೆಯುವ ಕಲರ್‍ಸ್ ಕನ್ನಡದ ವೀಕೆಂಡ್ ಕಾರ್ಯಕ್ರಮವಾದ ಸುಪರ್ ಮಿನಿಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ ಸಜಿಪಮುನ್ನೂರು ಗ್ರಾಮದ ಪರಾರಿ ನಿವಾಸಿ ಚಿತ್ರಾ ಹಾಗೂ ಶಿವಕುಮಾರ್ ರೈ ಪುತ್ರಿ ಕು. ಜನ್ಯ ರೈ ಅವರನ್ನು ಮಲಾಯಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜನ್ಯಾ ರೈ ಮಲಾಯಿಬೆಟ್ಟು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ ಬಳಿಕ ಸಜಿಪಮೂಡ ಸರಕಾರಿ ಶಾಲೆ, ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಹೈಸ್ಕೂಲ್ ಹಾಗೂ ಸದ್ಯ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಪದವಿ ಪೂರೈಸುತ್ತಿದ್ದು, ಸುಪರ್ ಮಿನಿಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಡಿದ ಕಲಾ ಸಾಧನೆಗೆ ಮೊದಲಾಗಿ ಹುಟ್ಟೂರ ಶಾಲೆಯಲ್ಲೇ ಸನ್ಮಾನ ಸ್ವೀಕರಿಸಿದ್ದು ಅತ್ಯಂತ ಹೆಚ್ಚು ಖುಷಿ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಜಿಪಮುನ್ನೂರು ಗ್ರಾ ಪಂ ಸದಸ್ಯ ಯೂಸುಫ್ ಕರಂದಾಡಿ ಮಾತನಾಡಿ ನಮ್ಮ ಗ್ರಾಮದ ವಿದ್ಯಾರ್ಥಿನಿಯೋರ್ವಳು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾ ಪ್ರೌಢಿಮೆ ಮರೆದಿರುವುದು ಇಡೀ ಗ್ರಾಮದ ಗೌರವವನ್ನು ಹೆಚ್ಚಿಸಿದೆ ಹಾಗೂ ಕಾರ್ಯಕ್ರಮದಲ್ಲಿ ತನಗೆ ದೊರೆತ ಬಹುಮಾನದ ನಗದು ಮೊತ್ತವನ್ನು ಮಂಗಳೂರಿನ ಎರಡು ಬಡವರ ಪರ ಆಶ್ರಮಗಳಾದ ಎಚ್.ಐ.ವಿ. ಹೋಂ ಫಾರ್ ಕಿಡ್ಸ್ ಹಾಗೂ ಇಂಚರ ಮಕ್ಕಳ ಮನೆ ಮಂಗಳೂರು ಈ ಸಂಸ್ಥೆಗಳಿಗೆ ದಾನವಾಗಿ ನೀಡಿರುವ ಈಕೆಯ ಉದಾರ ಮನೋಭಾವವನ್ನು ಶ್ಲಾಘನಾರ್ಹ ಎಂದರು.
ಈ ಸಂದರ್ಭ ಸಜಿಪಮುನ್ನೂರು ಗ್ರಾ.ಪಂ. ಸದಸ್ಯರಾದ ಅಹ್ಮದ್ ಕಬೀರ್, ಹೇಮಾವತಿ, ಶಹೀದಾ ಫಾತಿಮಾ, ಎಸ್‌ಡಿಎಂಸಿ ಅಧ್ಯಕ್ಷ ಇಬ್ರಾಹಿಂ ಮಲಾಯಿಬೆಟ್ಟು, ಉಪಾಧ್ಯಕ್ಷೆ ಮೋಹಿನಿ, ಮಾಜಿ ಅಧ್ಯಕ್ಷರಾದ ಮುಹಮ್ಮದ್ ರಫೀಕ್, ಇಕ್ಬಾಲ್, ಸದಸ್ಯರುಗಳಾ ವನಜಾ, ಇಂದಿರಾ, ರಝಿಯಾ, ಶಬನಾ, ಆಯಿಷಾ, ಸಲೀಮಾ, ಮೈಮೂನಾ, ಇಕ್ಬಾಲ್, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಅಶ್ವಿನಿ, ಸಹ ಶಿಕ್ಷಕಿ ಆಶಾಲತಾ ಮೊದಲಾದವರು ಭಾಗವಹಿಸಿದ್ದರು.