ಭಾರತದ ಪ್ರಥಮ ಶಿಕ್ಷಣ ಮಂತ್ರಿ, ಭಾರತರತ್ನ ಮೌಲಾನ ಅಬುಲ್ ಕಲಾಂ ಆಝಾದ್ ಪ್ರತ್ಯೇಕ ರಾಷ್ಟ್ರ ಸಿದ್ದಾಂತದ ಪ್ರಬಲ ವಿರೋಧಿಯಾಗಿದ್ದರು ಮತ್ತು ಭಾರತ ಅಖಂಡವಾಗಿಯೇ ಇರಬೇಕೆಂದು ವಾದಿಸಿದ್ದರು ಎಂದು ಬಿ.ಮೂಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಹೇಳಿದರು.
ಮೌಲಾನ ಅಬುಲ್ ಕಲಾಂ ಆಝಾದರ ಜನ್ಮ ದಿನದ ಅಂಗವಾಗಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳದಲ್ಲಿ ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಬಿ.ಎ ಮಹಮ್ಮದ್, ಟ್ರಸ್ಟಿ ಶಬೀರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಪಡೆದ ಕುರ್ನಾಡು ಸರಕಾರಿ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಅಶ್ಪಾಕ್ ಅಹ್ಮದ್ ಮ್ಯಾಗೇರಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಗಣಿತ ಶಿಕ್ಷಕ ಯಾಕೂಬ್ ನಡ, ಕಬಡ್ಡಿಯಲ್ಲಿ ತನ್ನ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ ತರಬೇತಿಗೊಳಿಸಿದ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಸೀದ್ ಪಡಂಗಡಿ ಇವರನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ, ಪ್ರೌಢ, ಪದವಿಪೂರ್ವ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ಅಧ್ಯಕ್ಷ ಶಮೀಯುಲ್ಲ ವಗ್ಗ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಘಟಕದ ಅಧ್ಯಕ್ಷ ಅಬ್ದುಲ್ ಹಮೀದ್ ಕೆ. ಸ್ವಾಗತಿಸಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಜೀದ್ ವಂದಿಸಿದರು. ಶಿಕ್ಷಕ ಅಕ್ಬರ್ ಅಲಿ ಕಾರ್ಯಕ್ರಮ ನಿರೂಪಿಸಿದರು.