ಮಾನವ ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದಾನೆ. ವಿದ್ಯಾರ್ಥಿಗಳ ಬದುಕು ಆಧುನಿಕ ಜೀವನಕ್ರಮದಿಂದಾಗಿ ಸಂಕುಚಿತಗೊಂಡಿದೆ. ಶಿಕ್ಷಣವು ಬದುಕನ್ನು ವಿಕಸನಗೊಳಿಸುವ ಬದಲಾಗಿ ಕೇವಲ ಅಂಕಗಳಿಕೆಗೆ ಸೀಮಿತವಾಗಿ ಬಿಟ್ಟಿದೆ. ಇದರಿಂದಾಗಿ ವಿದ್ಯಾರ್ಥಿಗಳು ಒತ್ತಡದ ಸ್ಥಿತಿಯಲ್ಲೇ ಬದುಕು ರೂಪಿಸುವ ದುಸ್ಥಿತಿ ಎದುರಾಗಿದೆ ಎಂದು ತರಬೇತುದಾರ ಅಭಿಜಿತ್ ಕರ್ಕೇರ ಹೇಳಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ’ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯಗಳು’ ತರಬೇತಿ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಬದಲಾವಣೆಗೆ ಅನುಗುಣವಾಗಿ ಮಾನವನು ತನ್ನ ವ್ಯಕ್ತಿತ್ವದಲ್ಲೂ ಪರಿಷ್ಕಾರಗಳನ್ನು ಮಾಡಿಕೊಂಡು ಬಂದಿದ್ದಾನೆ. ಬದುಕುವ ಕ್ರಮ, ಆಹಾರ, ನಡೆ ನುಡಿ, ಆಸೆ ಆಕಾಂಕ್ಷೆಗಳಲ್ಲಿ ಸಹ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳನ್ನು ನಿರಂತರ ತರಬೇತುಗೊಳಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಿದೆ. ಮಾನಸಿಕ ಒತ್ತಡ, ಹಿಂಜರಿಕೆ, ಸಭಾಕಂಪನ, ಸಂವಹನ ಕೌಶಲ ಮೊದಲಾದವುಗಳನ್ನು ಸೂಕ್ತ ತರಬೇತುಗಳ ಮೂಲಕ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರವಾಗಿ ಲವಲವಿಕೆಯನ್ನು ಕಾಯ್ದುಕೊಳ್ಳುವಲ್ಲಿ ತರಬೇತಿ ಕಾರ್ಯಕ್ರಮಗಳ ಪಾತ್ರ ಹಿರಿದಾದುದು ಎಂದು ಅಭಿಪ್ರಾಯಪಟ್ಟರು.
ಎಸ್.ವಿ.ಎಸ್. ಪ.ಪೂ.ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಕ್ಷೇಮಾಪಾಲನಾಧಿಕಾರಿ ಮತ್ತು ಗಣಕವಿಜ್ಞಾನ ಉಪನ್ಯಾಸಕ ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಕಾರ್‍ಯಕ್ರಮ ನಿರ್ವಹಿಸಿದರು.