ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ದತ್ತು ಯೋಜನೆಯಡಿ ನಿರ್ಮಾಣಗೊಂಡಿರುವ ದಡ್ಡಲಕಾಡುವಿನ ದ.ಕ. ಜಿ.ಪಂ. ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮೇಲಂತಸ್ತಿನ ಕಟ್ಟಡದ ಲೋಕಾರ್ಪಣೆ ಸಮಾರಂಭ ಡಿ.22 ಮತ್ತು 23ರಂದು ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಶನಿವಾರ ಸಂಜೆ ಶಾಲೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಮಾಹಿತಿ ನೀಡಿದ ಅವರು, ನನ್ನ ಲೋಕ ಸಭಾ ಕ್ಷೇತ್ರದಲ್ಲಿ ಇಂತಹ ಶಿಕ್ಷಣ ಸಂಸ್ಥೆಯಿರುವುದು ನನಗೆ ಹೆಮ್ಮೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವ್ಡೇಕಾರ್ ಅವರನ್ನು ಕರೆಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವುದಾಗಿ ಅವರು ತಿಳಿಸಿದರು.
ಶಿಕ್ಷಕರ ಭರ್ತಿಗೆ ಬೇಡಿಕೆ:
ವಿದ್ಯಾರ್ಥಿಗಳು ಹೆಚ್ಚಿರುವ ಸರಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರನ್ನು ನೇಮಿಸುವ ವಿಚಾರವಾಗಿ ಬೇಡಿಕೆ ಇರಿಸಲಾಗುವುದು ಎಂದ ನಳಿನ್, ಹಾಗೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ಇದು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಲು ಕಾರಣವಾಗಿದೆ. ಹೀಗಾಗಿ ಕೆಲ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ಆದರೆ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಇದಕ್ಕೆ ದಡ್ಡಲಕಾಡು ಶಾಲೆಯನ್ನು ದೇಶದಲ್ಲಿಯೇ ಮಾದರಿ ಶಾಲೆಯನ್ನಾಗಿ ರೂಪಿಸಿ ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸಾಧಿಸಿ ತೋರಿಸಿದೆ. ಸರಕಾರ ಅಥವಾ ಜನಪ್ರತಿನಿಧಿಗಳಿಂದ ಅನುದಾನ ಪಡೆಯದೆ ದಾನಿಗಳ ನೆರವಿನಿಂದ ಮಾದರಿಯಾಗಿ ಶಾಲೆ ಕಟ್ಟಡ ನಿರ್ಮಿಸಿದ್ದಾರೆ. 10 ಹೆಚ್ಚುವರಿ ಶಿಕ್ಷಕರನ್ನು ಖಾಸಗಿಯಾಗಿ ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಿಕೊಂಡಿದ್ದಾರೆ ಈ ಕಾರಣದಿಂದಾಗಿಯೇ ಈ ಪರಿಸರದಲ್ಲಿ ಸಾಕಷ್ಟು ಖಾಸಗಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳು ಇದ್ದರೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರಾ, ಹರಿಕೃಷ್ಣ ಬಂಟ್ವಾಳ್, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷೆ ಸುಮಿತ್ರ ಯೋಗೀಶ್ ಕುಲಾಲ್, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಸದಸ್ಯರಾದ ಪೂವಪ್ಪ ಮೆಂಡನ್, ಸಂಜೀವ ಪೂಜಾರಿ ಪಿಲಿಂಗಾಲು, ರೂಪ ಲೋಕನಾಥ, ಜಿ.ಆನಂದ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ ಪುರುಷೋತ್ತಮ ಅಂಚನ್ ಉಪಸ್ಥಿತರಿದ್ದರು.