‘ನಿನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಿಗಿದ್ರೆ, ಬರಿ ಒಂದು ಯುದ್ಧ ಗೆಲ್ಲಬಹುದು.
ಆದ್ರೆ, ನೀನು ಮುಂದೆ ನಿಂತಿದ್ದೀಯ ಅಂತ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಬೋದು..’
ಬಾಲಕನೊಬ್ಬನಿಗೆ ಆತನ ತಾಯಿ ಹೇಳುವ ದೃಶ್ಯವೀಗ ಸಖತ್ ಫೇಮಸ್ ಆಗ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೈಲರ್ ಅಂತರ್ಜಾಲದಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರದ ಟ್ರೇಲರ್ ಹೀಗಿದೆ. ಇನ್ನು ಸಿನಿಮಾ ಹೇಗಿದೆ ಎಂದು ಮೂಗಿಗೆ ಬೆರಳಿಟ್ಟುಕೊಂಡವರೇ ಜಾಸ್ತಿ ಎಂದು ಹೇಳುತ್ತಿದೆ ಟ್ರೈಲರ್ ನೋಡಿದವರ ಸಂಖ್ಯೆಯ ಲೆಕ್ಕಾಚಾರ.
ಏಕೆಂದರೆ, ಬಿಡುಗಡೆಯಾದ ಒಂದು ಗಂಟೇಲೇ ಒಂದು ಮಿಲಿಯನ್ ಮಂದಿ ಅದನ್ನು ವೀಕ್ಷಿಸಿದ್ದಾರೆ.
ಕನ್ನಡದ ರಾಕಿಂಗ್ ಸ್ಟಾರ್ ಇದೀಗ ಬಾಲಿವುಡ್ ಸ್ಟಾರ್ ಆಗಲು ಕೆಜಿಎಫ್ ವೇದಿಕೆ ಗಟ್ಟಿಮಾಡಿದೆ. ಏಕೆಂದರೆ ಹಿಂದಿ, ತಮಿಳು, ತೆಲುಗು ಭಾಷೆಯಲ್ಲೂ ಕೆಜಿಎಫ್ ಡಿಸೆಂಬರ್ 21ರಂದು ತೆರೆಕಾಣಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಟ್ರೈಲರ್ ತೆರೆಕಂಡಿದೆ. ನೋಡುಗರನ್ನ ಗಣಿ ಲೋಕಕ್ಕೆ ಕರೆದುಕೊಂಡು ಹೋಗುವಂತಹ ಮೇಕಿಂಗ್ ಅಷ್ಟು ಅದ್ಧೂರಿಯಾಗಿದೆ ಟ್ರೈಲರ್. ಕನ್ನಡ ಇಂಡಸ್ಟ್ರಿ ಸೇರಿದಂತೆ ಪರಭಾಷೆಯ ತಾರೆಯರು ಯಶ್ ಸಿನಿಮಾದ ಟ್ರೇಲರ್ ಗೆ ಫಿದಾ ಆಗಿದ್ದಾರೆ.
ಈ ಡೈಲಾಗ್ ಮತ್ತು ಇಡೀ ಟ್ರೈಲರ್ ನಲ್ಲಿ ಎದ್ದು ಕಾಣುವ ಅನಂತನಾಗ್ ನಿರೂಪಣೆ (ಕನ್ನಡ) ಸೂಪರ್ ಆಗಿದೆ.
ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಕನ್ನಡ ಸಹಿತ ಭಾರತದ ಪ್ರಮುಖ ನಟರು ಕಾಣಿಸಿಕೊಳ್ಳಲಿದ್ದಾರೆ.
ಮುಂಬೈನಿಂದ ಕೆಜಿಎಫ್ ಗೆ ಯಶ್ ಆಗಮನ, ಅಲ್ಲಿನ ರಾಜಕೀಯ, ಸಾಮಾಜಿಕ ಸ್ಥಿತಿ, ಹೀಗೆ ಒಂದು ಟ್ರೈಲರ್ ನಾನಾ ಕುತೂಹಲಗಳನ್ನು ಹುಟ್ಟಿಸಿದೆ.
ಬಾಂಬೆ ಏನು ನಿಮ್ಮಪ್ಪಂದಾ.? ಇಲ್ಲ ಕಣೋ, ಬಾಂಬೆ ನಿಮ್ಮಪ್ಪಂದೆ, ಆದ್ರೆ, ನಿಮ್ಮ ಅಪ್ಪ ನಾನೇ…ಈ ಡೈಲಾಗ್ ಈಗ ಎಲ್ಲರ ಬಾಯಲ್ಲಿ ಕುಣಿಯುತ್ತಿದೆ ಎಂದರೆ ಇದು ಯಶ್ ಚಮತ್ಕಾರ.
ಬಿಡುಗಡೆಗೆ ಡಿಸೆಂಬರ್ 21ರವರೆಗೆ ಕಾಯಬೇಕು.