ಜೇಸಿಐ ಬಂಟ್ವಾಳ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಮಕ್ಕಳಿಗಾಗಿ ಬುಧವಾರ ರಾತ್ರಿ ದೀಪಾವಳಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಶಾಲೆಯ ನೂರಾರು ವಿದ್ಯಾರ್ಥಿಗಳು ಪಟಾಕಿಯನ್ನು ಸಿಡಿಸಿ ಸಂಭ್ರಮ ಪಟ್ಟರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಬಳ್ಳಾರಿ, ಹುಬ್ಬಳಿ, ಚಿಕ್ಕಮಗಳೂರು, ಸಕಲೇಪುರ, ಮಡಿಕೇರಿ ಹೀಗೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳು ತಮ್ಮ ಮನೆಗೆ ತೆರಳಿ ಹಬ್ಬ ಆಚರಿಸಲು ಸಾಧ್ಯವಾಗದೇ ಇರುವುದರಿಂದ ಕಳೆದ ಕೆಲವು ವರ್ಷಗಳಿಂದ ಜೇಸಿಐ ಬಂಟ್ವಾಳ ಮತ್ತಿತರ ಸಂಘಟನೆಗಳು ಸೇರಿಕೊಂಡು ವಿದ್ಯಾರ್ಥಿಗಳೊಂದಿಗೆ ದೀಪಾವಳಿ ಆಚರಿಸಿಕೊಳ್ಳುತ್ತಾರೆ. ಈ ಬಾರಿಯೂ ಪುಟಾಣಿ ಮಕ್ಕಳೊಂದಿಗೆ ದೀಪಾವಳಿ ಆಚರಿಸಲಾಯಿತು.
ಹಣತೆಗಳನ್ನು ಹಚ್ಚಿದ ವಿದ್ಯಾರ್ಥಿಗಳು ಬಳಿಕ ಚಿನಕುರುಳಿ, ನೆಲಚಕ್ರ, ಹೂ ಕುಂಡ ಮತ್ತಿತರ ಪಟಾಕಿಗಳನ್ನು ಸಿಡಿಸಿ ಸಂಭ್ರಮ ಪಟ್ಟರು. ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿದರು. ಮಕ್ಕಳ ಹಬ್ಬದ ಖುಷಿ ನೆರೆದವರಲ್ಲೂ ಹಬ್ಬದ ಸಂಭ್ರಮವನ್ನು ಇಮ್ಮಡಿ ಗೊಳಿಸಿತು. ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಜೇಸಿಐ ಬಂಟ್ವಾಳದ ಸದಸ್ಯರಾದ ಸದಾನಂದ ಬಂಗೇರ, ಗಣೇಶ್ ಮೊಡಂಕಾಪು, ವೆಂಕಟೇಶ್ ಕೃಷ್ಣಪುರ, ಬಾಲಕೃಷ್ಣ, ದೀಪಕ್ ಸಾಲ್ಯಾನ್, ಶ್ರೀನಿವಾಸ್ ಅರ್ಬಿಗುಡ್ಡೆ, ಪ್ರಸಾದ್ ಮತ್ತಿತರರು ಹಾಜರಿದ್ದರು.