ಡಿಸೆಂಬರ್ 7 ಮತ್ತು 8ರಂದು ಫರಂಗಿಪೇಟೆಯ ’ಸೇವಾಂಜಲಿ ಪ್ರತಿಷ್ಠಾನದಆಶ್ರಯದಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಪ್ರೊ. ತುಕಾರಾಮ ಪೂಜಾರಿ ವಹಿಸಲಿದ್ದಾರೆ. ಇವರು ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲರು ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತಿಹಾಸ ಎಂದರೆ ಕೇವಲ ರಾಜಮಹಾರಾಜರ ಕಥೆಯಲ್ಲ. ಅತಿ ಸಾಮಾನ್ಯನಾಗಿ ಬದುಕಿದ ಮನುಷ್ಯನಿಗೂ ಸಾಂಸ್ಕೃತಿಕ, ಜಾನಪದ ಹಿನ್ನೆಲೆಯಿದೆ. ಈ ಅಂಶವನ್ನು ಇಟ್ಟುಕೊಂಡೇ ಬಂಟ್ವಾಳದ ಪ್ರೊ. ತುಕಾರಾಮ ಪೂಜಾರಿ ಮತ್ತು ಆಶಾಲತಾ ಸುವರ್ಣ ದಂಪತಿ ತಮ್ಮ ಮನೆಯಂಗಳದಲ್ಲೇ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ ಆರಂಭಿಸಿದರು. ನಮ್ಮ ಹಿರಿಯರು ಉಪಯೋಗಿಸಿದ, ಸಾಮಾನ್ಯರ ಕಣ್ಣಿಗೆ ಅತಿ ಸಾಮಾನ್ಯ ಎನಿಸುವಂಥ ವಸ್ತುಗಳನ್ನು ಊರೂರು ತಿರುಗಿ ಸಂಗ್ರಹಿಸಿದರು. ಮೊದಲು ಎಸ್.ವಿ.ಎಸ್. ಕಾಲೇಜಿನಲ್ಲಿಟ್ಟಿದ್ದ ಪುಟ್ಟ ಸಂಗ್ರಹ ದೊಡ್ಡದಾಯಿತು. ಈ ಸಂದರ್ಭ ಪೂಜಾರಿಯವರು ತಮ್ಮ ಮನೆಯನ್ನೇ ವಸ್ತುಗಳನ್ನು ರಾಶಿ ಹಾಕಿದರು. ಅದಕ್ಕೊಂದು ಸ್ಪಷ್ಟ ಸ್ವರೂಪ ಕೊಡಲು ತೀರ್ಮಾನಿಸಿ, ತಮ್ಮ ಪುಟ್ಟ ಜಾಗದಲ್ಲೇ ಮ್ಯೂಸಿಯಂ ಕಟ್ಟಿದರು. ಜೊತೆಗೆ ಅಂದದ ಗ್ಯಾಲರಿ. ನಾಣ್ಯಶಾಸ್ತ್ರ ಹಾಗೂ ತುಳು ಅಧ್ಯಯನ ಆಸಕ್ತರಿಗೆ ಲೈಬ್ರರಿ ನಿರ್ಮಾಣವಾಯಿತು. ಒಂದಿಡೀ ಅಕಾಡೆಮಿಯೋ, ಸರಕಾರದ ತಂಡವೋ ಮಾಡಬೇಕಾದ ಕೆಲಸವನ್ನು ಮಾಡುತ್ತಿರುವ ಬಿ.ಸಿ.ರೋಡಿನ ಸಂಚಯಗಿರಿ ನಿವಾಸಿ ತಾಲೂಕಿನ ಹೆಮ್ಮೆಯ ಪ್ರೊ. ತುಕಾರಾಮ ಪೂಜಾರಿ ಈ ಬಾರಿ ಸಮ್ಮೇಳನಾಧ್ಯಕ್ಷತೆ ವಹಿಸುತ್ತಿದ್ದಾರೆ.
ಸಾಮಾನ್ಯ ವ್ಯಕ್ತಿಯ ಬಗ್ಗೆ ಯಾವ ದಾಖಲೆಗಳೂ ಇರುವುದಿಲ್ಲ. ಅಂದರೆ ಶೇ.80ರಿಂದ 90ರಷ್ಟು ಜನರ ಇತಿಹಾಸ ನಮಗೆ ಗೊತ್ತಿರುವುದಿಲ್ಲ. ಭೌತಿಕ ವಸ್ತು ಪರಿಕರಗಳ ಸಂಗ್ರಹಕ್ಕೆ ತುಕಾರಾಮ ಪೂಜಾರಿಯವರು ಹೊರಟಾಗ ಆಯ್ಕೆ ಮಾಡಿದ್ದೇ ಜನಸಾಮಾನ್ಯರ ಬದುಕಿನ ನೋಟವನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಸದಾಶಯದೊಂದಿಗೆ.
ಈ ಪೀಳಿಗೆ ನೋಡದೇ ಇರುವ ನಮ್ಮ ಹಿರಿಯ ನಾಗರಿಕರು ಬಳಸಿರಬಹುದಾದ ನಮ್ಮ ನಿಮ್ಮ ಹಿಂದಿನ ತಲೆಮಾರು ತಮ್ಮ ದೈನಂದಿನ ಬದುಕಿನಲ್ಲಿ ಬಳಸಿರುವ ವಸ್ತುಗಳು ಇಲ್ಲಿವೆ. ಇವೇ ಸಮಗ್ರ ತುಳು ಬದುಕು. ಜನರಿಗೆ, ಅಧ್ಯಯನಕಾರರಿಗೆ, ಸಂಶೋಧಕರಿಗೆ ಇದರ ಸ್ಪಷ್ಟ ಚಿತ್ರಣ, ಮಾಹಿತಿ ದೊರಕಬೇಕು ಎಂಬುದು ಮೂಲ ಉದ್ದೇಶ. ಹೀಗಾಗಿ ಹಳೆಯ ಪರಿಕರಗಳನ್ನು ಸಂಗ್ರಹಿಸಲು ತುಕಾರಾಮ ಪೂಜಾರಿಯವರಿಗೆ ವರ್ಷಗಳೇ ತಗಲಿವೆ. ಈ ಶ್ರಮದ ಫಲವಾಗಿ ಇಂದು ವಸ್ತು ಸಂಗ್ರಹಾಲಯ ಎದ್ದು ನಿಂತಿದೆ.
ರಾಣಿ ಅಬ್ಬಕ್ಕನ ಬಗ್ಗೆ ಅವರಿಗೆ ಕುತೂಹಲ ಮೂಡಿಸಿದ್ದು ಎಲ್ಲೂರು ಉಮೇಶ ರಾವ್. ರಾಣಿ ಅಬ್ಬಕ್ಕ ತುಳು ಬದುಕಿನ ಪ್ರತೀಕವೂ ಹೌದು. ಸಂಗ್ರಹಿಸುತ್ತಿದ್ದ ವಸ್ತುಗಳನ್ನು ಒಟ್ಟು ಹಾಕಿ ಅಬ್ಬಕ್ಕನ ಹೆಸರಲ್ಲಿ ಸಂಗ್ರಹಾಲಯವನ್ನು 1995 ಆರಂಭಿಸಿದರು. 2011 ಡಿಸೆಂಬರ್ ನಲ್ಲಿ ರಾಣಿ ಅಬ್ಬ,ಕ್ಕ ಆರ್ಟ್ ಗ್ಯಾಲರಿಯನ್ನು ಆರಂಭಿಸಿದರು. ಆಗ 24 ಮಂದಿ ಅಂತಾರಾಷ್ಟ್ರೀಯ ಕಲಾವಿದರು ಆಗಮಿಸಿ ರಾಣಿ ಅಬ್ಬಕ್ಕನ ಚಿತ್ರ ಬಿಡಿಸಿದರು. ಉಳ್ಳಾಲದಲ್ಲಿ ಪೋರ್ಚುಗೀಸರ ವಿರುದ್ಧ ಒಂಟಿಯಾಗಿ ಹೋರಾಡಿದ ವೀರ ವನಿತೆ ರಾಣಿ ಅಬ್ಬಕ್ಕಳ ಜೀವನ ಚರಿತ್ರೆ ಕುರಿತಾಗಿ ಹಲವಾರು ಕಲಾವಿದರ ಕಲ್ಪನೆಯ ನೂರಾರು ಚಿತ್ರಗಳು ಗ್ಯಾಲರಿಯಲ್ಲಿವೆ. ಈ ಕೇಂದ್ರದಲ್ಲಿ ವರ್ಷವಿಡೀ ತುಳುನಾಡಿನ ಕುರಿತು ಕಮ್ಮಟ, ಕಾರ್ಯಾಗಾರಗಳು ನಡೆಯುತ್ತಲೇ ಇರುತ್ತವೆ.ಅಬ್ಬಕ್ಕನಿಗೆ ಸಂಬಂಧಿಸಿದ ರಾಷ್ಟ್ರಮಟ್ಟದ ಗ್ಯಾಲರಿ ಬೇರೆಲ್ಲೂ ಸಿಗದು ಎಂಬಷ್ಟು ವಿನ್ಯಾಸ ಅದ್ಭುತ.
ಉತ್ಸವ, ಸಮ್ಮೇಳನ ಇತ್ಯಾದಿಗಳಿಗೆ ಕೋಟಿ ವೆಚ್ಚ ಮಾಡುವ ಆಡಳಿತ ಯಂತ್ರಕ್ಕೆ ಇಂಥ ಕೆಲಸ ಕಾರ್ಯಗಳು ಕಣ್ಣಿಗೆ ಕಾಣಿಸುವುದಿಲ್ಲ ಎಂಬುದು ವಿಪರ್ಯಾಸ. ಹೀಗಾಗಿ ಪ್ರೊಫೆಸರ್ ದಂಪತಿ ತಮ್ಮ ದುಡಿಮೆಯ ಬಹುಪಾಲು ಅಂಶವನ್ನು ತುಳು ಬದುಕು ಸಂಗ್ರಹಾಲಯಕ್ಕೇ ಮೀಸಲಿಟ್ಟಿದ್ದಾರೆ. ಕೆಲ ದಾನಿಗಳ ನೆರವೂ ಸಿಕ್ಕಿದೆ. ಮೂರು ಸರಕಾರಿ ಇಲಾಖೆ, ಅಕಾಡೆಮಿಗಳು ಮಾಡುವ ಕೆಲಸವನ್ನು ದಂಪತಿಯೇ ಮಾಡಿದ್ದಾರೆ ಎಂಬುದು ಸಣ್ಣ ವಿಷಯವೇನಲ್ಲ.
ಡಿ.ಎಡ್, ಬಿ.ಎಡ್ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಇಲ್ಲಿರುವ ವಸ್ತುಗಳ ಮೂಲ, ಅದರ ಹಿನ್ನೆಲೆ ಅರಿತರೆ, ಮಕ್ಕಳಿಗೂ ತಿಳಿಹೇಳಲು ಸಾಧ್ಯ. ಪ್ರತಿಯೊಂದು ವಸ್ತುವೂ ಒಂದೊಂದು ಕಥೆ ಹೇಳುತ್ತದೆ. ಒಂದೊಂದು ಸಂಗ್ರಹದಲ್ಲೂ ನಮ್ಮ ನೆಲದ ಬದುಕು ಅಡಗಿದೆ.
ಪ್ರೊಫೆಸರ್ ದಂಪತಿ ಅಪೇಕ್ಷೆಯೂ ಅಷ್ಟೇ. ಪ್ರತಿಯೊಂದು ವಸ್ತುವನ್ನೂ ಅಧ್ಯಯನಕಾರರು ಅನುಭವಿಸಿ ಅದರ ಮಹತ್ವವನ್ನು ಅರಿಯಬೇಕು. ಒಂದು ಅಕಾಡೆಮಿ ಏನು ಮಾಡಬೇಕೋ ಅವೆಲ್ಲ ಇಲ್ಲಿವೆ. ಪ್ರತಿಯೊಂದು ವಸ್ತುವಿನ ಹಿನ್ನೆಲೆ, ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಈಗಿನ ತಲೆಮಾರು ಮಾಡಿದರೆ ದಶಕಗಳ ಶ್ರಮ ಸಾರ್ಥಕ್ಯ ಪಡೆಯುತ್ತದೆ.
(ಚಿತ್ರಕೃಪೆ: ಪ್ರೊ. ತುಕಾರಾಮ ಪೂಜಾರಿ ಸಂಗ್ರಹ)