ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ವೈಯುಕ್ತಿಕ ವಿವರಗಳನ್ನು ಅಪ್‌ಲೋಡ್ ಮಾಡುವಾಗ ಹೆಚ್ಚಿನ ನಿಗಾ ವಹಿಸಬೇಕು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ವಿಭಾಗದ ಪೊಲೀಸ್ ನಿರೀಕ್ಷಕ ಸವಿತ್ರ ತೇಜ ಕರೆ ನೀಡಿದರು.
ಕರ್ನಾಟಕ ಪತ್ರಕರ್ತರ ಸಂಘ (ರಿ) ಬಂಟ್ವಾಳ ತಾಲೂಕು ಆಶ್ರಯದಲ್ಲಿ ಮಾಣಿ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಸೈಬರ್ ಕ್ರೈಂ ಹಾಗೂ ಪತ್ರಿಕೋದ್ಯಮ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕಂಪ್ಯೂಟರ್, ಇಂಟರ್‌ನೆಟ್, ಮೊಬೈಲ್ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ವಿವಿಧ ರೀತಿಯ ವಂಚನಾ ಜಾಲಗಳು ವ್ಯಾಪಕವಾಗಿ ಕಾರ್ಯಪ್ರವೃತ್ತವಾಗಿದ್ದು, ವಿದ್ಯಾವಂತ ಯುವಜನರೇ ಇವುಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಜನತೆ ಜಾಗೃತರಾಗುವುದರ ಜೊತೆಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ. ಎಂದರು. ಮಂಗಳೂರು ಶ್ರೀನಿವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಜಯಾನಂದ ಪೆರಾಜೆ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ನೀಡಿದರು.
ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಕಿರಣ್ ಹೆಗ್ಡೆ ಉದ್ಘಾಟಿಸಿದರು. ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಐಸಾಕ್ ರಿಚರ್ಡ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲ ರವೀಂದ್ರ ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಕೆ. ಭಂಡಾರಿ, ಬಂಟ್ವಾಳ ತಾಲೂಕು ಕೇಂದ್ರ ಸ್ಥಾನೀಯ ಶಿರಸ್ತೇದಾರ ರಾಜೇಶ್ ನಾಯಕ್, ಮೆಸ್ಕಾಂ ಮಾಣಿ ಶಾಖಾಧಿಕಾರಿ ದಿನೇಶ್, ಮಾಣಿ ಗ್ರಾ.ಪಂ. ಸದಸ್ಯ ಇಬ್ರಾಹಿಂ ಕೆ. ಮಾಣಿ, ಶಾಲಾಭಿವೃದ್ದಿ ಮಂಡಳಿ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ, ಕಾಲೇಜು ವಿದ್ಯಾರ್ಥಿ ನಾಯಕ ಗ್ಲಾಸನ್ ತೋರಸ್ ಭಾಗವಹಿಸಿದ್ದರು.
ಸಂಘದ ಕಾರ್ಯದರ್ಶಿ ವಿ.ಟಿ. ಪ್ರಸಾದ್, ಸದಸ್ಯರುಗಳಾದ ಜ್ಯೋತಿಪ್ರಕಾಶ್ ಪುಣಚ, ಯು. ಮುಸ್ತಫಾ ಆಲಡ್ಕ, ಬಾಲಕೃಷ್ಣ ಕಲ್ಲಡ್ಕ, ಮಹೇಶ್ ನೇರಳಕಟ್ಟೆ, ಸತೀಶ್ ಕಾರ್ತಿಕ್ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಫಾರೂಕ್ ಬಂಟ್ವಾಳ ಸ್ವಾಗತಿಸಿ, ಉಪಾಧ್ಯಕ್ಷ ಪಿ.ಎಂ. ಅಶ್ರಫ್ ಪಾಣೆಮಂಗಳೂರು ವಂದಿಸಿದರು. ಸದಸ್ಯ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.