5 ಲಕ್ಷದವರೆಗಿನ ಕಾಮಗಾರಿಗಳ ತುಂಡು ಗುತ್ತಿಗೆ ಕರಾರು ಮುಂದುವರೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ತಾಪಂ ಸದಸ್ಯ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ವತಿಯಿಂದ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಗೊಳ್ಳುತ್ತಿರುವ ಶಾಸಕರ ಮತ್ತು ಲೋಕ ಸಬಾ ಸದಸ್ಯರ ಪ್ರದೇಶಾಭಿವೃದ್ದಿ ಅನುದಾನ ಸೇರಿದಂತೆ ಜಿಲಾ ಪಂಚಾಯತ್ , ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಗಳ ವಿವಿಧ ಯೋಜನೆಗಳಲ್ಲಿ ರೂ.೫ ಲಕ್ಷ ವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆ ಕರಾರಿನಡಿ ನಿರ್ವಹಿಸಲಾಗುತ್ತಿದ್ದು ಸರಕಾರದ ಯೋಜನೆಗಳ ಕಾಮಗಾರಿಗಳು ಶೀಘ್ರವಾಗಿ ಅನುಷ್ಠಾನಗೊಂಡು ಪ್ರಗತಿಗೊಳ್ಳಲು ಸಾಧ್ಯವಾಗುತ್ತದೆ. ಇಂತಹ ತುಂಡು ಗುತ್ತಿಗೆ ಕರಾರು ನಿರ್ವಹಣೆ ಲೋಕೋಪಯೋಗಿ ಇಲಾಖೆಯಲ್ಲಿ ಆಗುತ್ತಿಲ್ಲ. ಅಂದರೆ ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗಳಲ್ಲಿ ಮಾತ್ರ ಸಣ್ಣ ಸಣ್ಣ ಮೊತ್ತದ ಕಾಮಗಾರಿಗಳು ಇರುವುದರಿಂದ ತುಂಡು ಗುತ್ತಿಗೆ ಕರಾರು ಯಶಸ್ವಿಯಾಗಿ ಪ್ರಗತಿ ಕಾಣಲು ಸಾದ್ಯವಾಗುತ್ತಿತ್ತು. ಆದರೆ ಲೋಕೋಪಯೋಗಿ ಇಲಾಖೆಯಲ್ಲಿ ತುಂಡು ಗುತ್ತಿಗೆ ಕರಾರು ಇಲ್ಲದನ್ನು ಮನಗಂಡು ಸರಕಾರದ ಹಣಕಾಸು ಇಲಾಖೆ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಎರಡಕ್ಕೂ ಒಂದೇ ರೀತಿಯಲ್ಲಿ ನೀಡಿದ ನಿರ್ದೇಶನದಂತೆ ಆದೇಶ ಹೊರಡಿಸಿ ತುಂಡು ಗುತ್ತಿಗೆ ಕರಾರು ರದ್ದು ಪಡಿಸಿದೆ. ರೂ. ೧೦ ಲಕ್ಷ ವರೆಗಿನ ಕಾಮಗಾರಿಗಳಿಗೆ ಉಪವಿಭಾಗ ವ್ಯಾಪ್ತಿಯಲ್ಲಿಯೇ ಟೆಂಡರ್ ಗುತ್ತಿಗೆ ಕರಾರು ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ, ತಾಲೂಕು ಪಂಚಾಯತ್ ಗಳಲ್ಲಿ, ಜಿಲ್ಲಾ ಪಂಚಾಯತ್ ಗಳಲ್ಲಿ ತುಂಡು ಗುತ್ತಿಗೆ ಕರಾರು ಪತ್ರದ ಆದಾರದಲ್ಲಿ ಕಾಮಗಾರಿಗಳು ಈಗಾಗಲೇ ಅನುಷ್ಠಾನಗೊಂಡಿವೆ. ಹಾಗೂ ಟೆಂಡರ್ ಪ್ರಕ್ರಿಯೆಗೆ ತುಂಬಾ ಕಾಲವಕಾಶ ಬೇಕಾಗಿರುವುದರಿಂದ ಕಾಮಗಾರಿ ಪ್ರಗತಿ ಕುಂಠಿತವಾಗಿದೆ. ಇದರಿಂದ ತ್ರಿಸ್ಥರದ ಪಂಚಾತಯತ್ ವ್ಯವಸ್ಥೆಗಳ ಅಭಿವೃದ್ದಿಗೆ ತೊಡಕಾಗಿರುತ್ತದೆ. ಆದುದರಿಂದ ಈ ಹಿಂದಿನಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಅನುಷ್ಠಾನವಾಗುತ್ತಿರುವ ರೂ. ೫ ಲಕ್ಷ ವರೆಗಿನ ಕಾಮಗಾರಿಗಳಿಗೆ ತುಂಡು ಗುತ್ತಿಗೆ ಕರಾರಿನಂತೆ ನಿರ್ವಹಿಸಲು ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.