ಕಲ್ಲಡ್ಕ

ಮಜಿ ವೀರಕಂಭ ಸರ್ಕಾರಿ ಶಾಲಾ ಮಕ್ಕಳಿಗೆ ಗುಬ್ಬಚ್ಚಿಗೂಡು ಪ್ರಾತ್ಯಕ್ಷಿಕೆ

ಪ್ರಾಣಿ-ಪಕ್ಷಿ ಸಂಕುಲಗಳು ಅಳಿವಿನಂಚಿಗೆ ಹೋಗುತ್ತಿವೆ. ಇವುಗಳ ಕುರಿತು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ನಾಶಕ್ಕೆ ನಾವೇ ದಾರಿಮಾಡಿಕೊಳ್ಳುವುದಲ್ಲಿ ಸಂಶಯವಿಲ್ಲ ಎಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಭ ಶಾಲಾ ಎಸ್. ಡಿ. ಎಂ.ಸಿ. ಅಧ್ಯಕ್ಷ ಸಂಜೀವ ಮೂಲ್ಯ ಹೇಳಿದರು.

ಇಲ್ಲಿ ನಡೆದ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್‍ಯಾಗಾರಗುಬ್ಬಚ್ಚಿಗೂಡು – ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ವಹಿಸಿದ ಮಾತನಾಡಿದರು.ಮಾನವನು ಸಂಘಜೀವಿ. ಆತನು ಪರಿಸರದೊಂದಿಗೆ ಬದುಕಬೇಕು ಪ್ರಕೃತಿಯು ನಿಸರ್ಗದತ್ತವಾಗಿ ನಮಗೆ ದೊರೆತಿರುವ ಒಂದು ವರದಾನವಾಗಿದೆ, ಆದರೆ ಬುದ್ದಿವಂತ ಪ್ರಾಣಿ ಎಂದು ಕರೆಯಲ್ಪಡುವ ಮಾನವನೇ ಇದೆಲ್ಲವನ್ನು ತನ್ನ ವಶಪಡಿಸುವ ಸಲುವಾಗಿ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಬೇಕೆಂಬ ಕೆಟ್ಟ ಆಸೆಯಿಂದ ಪರಿಸರದ ಮೇಲೆ ವೈಜ್ಣನಿಕತೆಯ ಹೆಸರಿನಲ್ಲಿ ತನ್ನ ವಕ್ರ ದೃಷ್ಟಿಯನ್ನು ಬೀರಿದ್ದಾನೆ ಇದರ ಪರಿಣಾಮವಾಗಿ ಪಕ್ಷಿಸಂಕುಲ ಅಳಿವಿನಂಚಿಗೆ ಹೋಗುತ್ತಿವೆ ಎಂದರು.

ಕಾರ್ಯಕ್ರಮ ಸಂಘಟಿಸಿದ ಎಸ್.ಕೆ.ಪಿ.ಎ ಬಂಟ್ವಾಳ ಸದಸ್ಯರಾದ ಕಲ್ಲಡ್ಕ ವಲಯದ ಪ್ರತಿನಿಧಿ ಜಯರಾಮ ರೈ ಇವರು ಮಾತನಾಡಿ ತಮ್ಮ ಬಾಲ್ಯದ ದಿನಗಳಲ್ಲಿ ಇದ್ದ ಪರಿಸರದ ಜೊತೆಗಿನ ಒಡನಾಟವು ಇಂದು ಕಣ್ಮರೆಯಾಗಿವೆ. ಪ್ರಕೃತಿಯ ಜೊತೆಗಿನ ಸಂಬಂಧವನ್ನು ಕಂಪ್ಯೂಟರ್, ಟಿ.ವಿ. ಮೊಬೈಲುಗಳು ನುಂಗಿವೆ, ನಿಸರ್ಗದ ಮಡಿಲಿನಲ್ಲಿ ಬೆಳೆದ ಮತ್ತು ವೈಜ್ಞಾನಿಕತೆಯ ಚೌಕಟ್ಟಿನಲ್ಲಿ ಬೆಳೆದ ಮಕ್ಕಳಿಗೆ ಬಹಳಷ್ಟು ವ್ಯತ್ಯಾಸಗಳಿವೆ. ಪರಿಸರವಂಚಿತ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವು ವಯಸ್ಸಿಗೆ ಮುಂಚಿತವಾಗಿ ತೊಂದರೆಗೆ ಒಳಗಾಗುತ್ತದೆ. ಆದ್ದರಿಂದ ಮಕ್ಕಳನ್ನು ನಿಸರ್ಗದ ಜೊತೆಗೆ ಆಡಲು ಬಿಡಬೇಕು ಆಗ ಪರಿಸರದತ್ತವಾಗಿ ದೊರೆಕುವ ಹಲವು ಕಲಿಕೆಗಳನ್ನು ಪಡೆಯಲು  ಸಾಧ್ಯವಾಗುತ್ತದೆ ಹಾಗೆಯೇ ಅಳಿವಿನಂಚಿಗೆ ಬಂದಿರುವ ಪಕ್ಷಿ -ಪ್ರಾಣಿಗಳ ಕುರಿತ ಜ್ಷಾನವೂ ದೊರಕುವುದರಿಂದ ಪ್ರಕೃತಿ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪರಿಸರದ ಕುರಿತಾಗಿ ಪ್ರಾಥಮಿಕ ಮಟ್ಟದಲ್ಲಿಯೇ ಶಿಕ್ಷಣ ದೊರಕಿದಾಗ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದೊಂದಿಗೆ ಪರಿಸರದ ಕುರಿತಾದ ಆಸಕ್ತಿ ಬೆಳೆಯುತ್ತದೆ. ಈಗಾಗಲೇ ಪರಿಸರ ಮಿತ್ರ ಪ್ರಶಸ್ತಿ ಪಡೆದಿರುವ ನಮ್ಮ ಶಾಲೆಯಲ್ಲಿ ಇನ್ನಷ್ಟು ಪರಿಸರ ಮುಖಿ ಕೆಲಸ ಮಾಡುವಲ್ಲಿ ಎಸ್.ಕೆ.ಪಿ.ಎ. ಬಂಟ್ವಾಳ ವಲಯವು ನಮ್ಮ ಜೊತೆ ಕೈಜೋಡಿಸಿರುವುದು ಸಂತಸದಾಯಕ ವಿಷಯವಾಗಿದೆ ಎಂದು ತಿಳಿಸಿದರು

ಮುಖ್ಯ ಅತಿಥಿ ಪತ್ರಕರ್ತ ರಾಜ ಬಂಟ್ವಾಳ ರವರು ಮಾತನಾಡಿ ಗುಬ್ಬಚ್ಚಿಗೂಡು ಕಾರ್‍ಯಾಗಾರದ ಮೂಲಕ ಪರಿಸರದ ಕುರಿತು ಜನಜಾಗೃತಿ ಮೂಡಿಸುತ್ತಿರುವ ನಿತ್ಯಾನಂದ ಶೆಟ್ಟಿ ಬದ್ಯಾರು ಇವರು ಪ್ರಕೃತಿ ಸಮತೋಲನ ಮಾಡುವಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸುತ್ತಿದ್ದಾರೆ.ಹಣದ ಹಿಂದೆ ಓಡುವ ಈ ಜನಾಂಗದಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗಾಗಿ ಹೋರಾಟ ಮಾಡುತ್ತಿರುವುದು ವಿಶೇಷವೇ ಸರಿ. ತಮ್ಮ ಮನೆಯ ಸುತ್ತಮುತ್ತಲಿನ ೨ ಎಕ್ರೆ ಜಾಗದಲ್ಲಿ ಹಕ್ಕಿಗಳಿಗಾಗಿ ಆಹಾರ-ನೀರು ಒದಗಿಸುತ್ತಿರುವ ಭಗೀರಥನೇ ಸರಿ ಅವರ ಕೆಲಸವು ಶ್ಲಾಘನೀಯವಾದುದು ಎಂದರು.

ಗುಬ್ಬಚ್ಚಿಗೂಡು ಕಾರ್‍ಯಾಗಾರ ನಡೆಸಿದ ನಿತ್ಯಾನಂದ ಶೆಟ್ಟಿ ಬದ್ಯಾರು ಹಾಗೂ ಜೀವನ ಸಂಗಾತಿಯಾಗಲಿರುವ ರಮ್ಯ ರವರು ಹಕ್ಕಿಗಳ ಜೀವನಕ್ರಮ, ತಾವು ತಮ್ಮ ಮನೆ ಪರಿಸರದಲ್ಲಿ ಈ ಬಗ್ಗೆ ನಡೆಸಿದ ಹಲವು ಪರಿಸರ ಮುಖಿ ಕಾರ್ಯಗಳ, ಹಕ್ಕಿಗಳ ಕುರಿತು ನಮಗೆ ತಿಳಿದಿರುವ ಹಲವು ವಿಚಾರಗಳು, ಪಕ್ಷಿ ಸಂಕುಲಗಳ ಉಳಿವಿಗಾಗಿ  ಮರಗಿಡಗಳ ಬೆಳೆಸುವಿಕೆ, ಕಾಂಕ್ರಿಟೀಕರಣದ ನೆಪದಲ್ಲಿ ಬದಲಾಗುತ್ತಿರುವ ಪರಿಸರವು ಪಕ್ಷಿಗಳಿಗೆ ಯಾವ ರೀತಿಯಲ್ಲಿ ಮಾರಕವಾಗಿವೆ, ಅವುಗಳು ಮರೆಯಾಗದಂತೆ ನಾವು ಮಾಡಬೇಕಾದ ಕಿರು ಪ್ರಯತ್ನ, ಮುಂತಾದವುಗಳ ಕುರಿತು ವಿವರಿಸಿದರು. ಪರಿಸರದಲ್ಲಿ ಶಾಲಾ ಮಕ್ಕಳೊಂದಿಗೆ ಸಮುದಾಯ ಹಾಗೂ ಪೋಷಕರಿಗೆ ಪಕ್ಷಿಗಳಿಗೆ ಆಹಾರ-ನೀರು ಒದಗಿಸುವ ಬಗೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಹಾಗೂ ಕೃತಕ ಗೂಡು ಮತ್ತು ಆಹಾರ ನೀರು ಒದಗಿಸುವ ಮಣ್ಣಿನ ಪರಿಕರಗಳನ್ನು ಉಚಿತವಾಗಿ ಒದಗಿಸಿದರು. ಪ್ರೋತ್ಸಾಹಕದಾಯಕವಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಕಾರ್ಯದ ಮೂಲಕ ತಾವೇ ರಚಿಸಿದ ಕವನ ಸಂಗ್ರಹವನ್ನು ಬಹುಮಾನವಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಕೆ.ಪಿ.ಎ. ಬಂಟ್ವಾಳ ವಲಯದ ಪದಾಧಿಕಾರಿಗಳ ಸುಕುಮಾರ್ ಬಂಟ್ವಾಳ, ದಯಾನಂದ ಬಂಟ್ವಾಳ, ವರುಣ್ ಕಲ್ಲಡ್ಕ, ಚಿನ್ನಾ ಮೈರ, ವೀರಕಂಭ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಪ್ರಭು, ಹಳೆ ವಿ.ಸಂಘ ಅಧ್ಯಕ್ಷ ರಮೇಶ್ ಗೌಡ ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು, ಕೇಸರಿ ಪ್ರೇಡ್ಸ್ ಅಧ್ಯಕ್ಷ ರಮೇಶ್ ಕುಲಾಲ್, ಯುವ ಪ್ರೆಂಡ್ಸ್ ಅಧ್ಯಕ್ಷ ವಾಸುನಾಯ್ಕ, ಯುವಶಸಕ್ತಿ ಫ್ರೆಂಡ್ಸ್‌ನ ದಿನೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಕಂಭ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ನಾಯ್ಕ ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಾವೇ ರಚಿಸಿದ ಪರಿಸರ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶಕುಂತಳಾ, ನಳಿನಾಕ್ಷಿ, ಜ್ಯೋತಿ, ನಿಶ್ಮಿತಾ ಹಾಗೂ ಜಯಲಕ್ಷ್ಮಿ ಸಹಕರಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts