ನಾನು ಜುಜುಬಿ ರಾಜಕೀಯ ಮಾಡೋದಿಲ್ಲ. ಬಡವರ ವಿರುದ್ಧ ಹೋಗುವುದಿಲ್ಲ. 94ಸಿ ಸಹಿತ ಸರಕಾರಿ ಯೋಜನೆ ಹಕ್ಕುಪತ್ರ ವಿತರಣೆಗೆ ತಡೆಯೊಡ್ಡಿಲ್ಲ. ಬಿಜೆಪಿ ವಿನಾ ಕಾರಣ ತನ್ನ ಮೇಲೆ ಗೂಬೆ ಕೂರಿಸುತ್ತಿದೆ. ಹಾಗೆ ನೋಡಿದರೆ, ಅಪಪ್ರಚಾರ ಮಾಡುವುದೇ ಬಿಜೆಪಿಯ ಉದ್ಯೋಗ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳದ ಪಕ್ಷ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ನಾನು ಸಚಿವನಾಗಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿ 94ಸಿ, 94ಸಿಸಿಯಡಿ ಹಕ್ಕುಪತ್ರ ವಿತರಿಸಲಾಗಿತ್ತು ಎಂದರು. 94ಸಿ ಸಹಿತ ಸರಕಾರಿ ಯೋಜನೆಗಳ ಹಕ್ಕುಪತ್ರಗಳನ್ನು ಶಾಸಕರೇ ವಿತರಿಸಬೇಕು ಎಂದೇನಿಲ್ಲ. ಕೀಳು ಮಟ್ಟದ ರಾಜಕೀಯ ಮಾಡುವವನು ನಾನಲ್ಲ. ನವಂಬರ್ ಮೊದಲ ವಾರದಲ್ಲಿ ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಬಾಕಿ ಉಳಿದಿರುವ ಎಲ್ಲಾ ಹಕ್ಕುಪತ್ರಗಳ ವಿತರಣೆಗೆ ವ್ಯವಸ್ಥೆ ಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ನಿಗದಿಯಾಗಿದ್ದ ಕಾರ್ಯಕ್ರಮ ತಡೆಯಲು ತಾನು ಹೇಳಿಲ್ಲ, ವಿನಾ ಕಾರಣ ತನ್ನ ಮೇಲೆ ತಪ್ಪಾಭಿಪ್ರಾಯ ಬಂದಿದೆ ಎಂದರು.
ಉಜ್ವಲ ಯೋಜನೆ ಯಾರು ವಿತರಿಸಿದ್ದು?
ತನ್ನ ವಿರುದ್ಧ ಹಸ್ತಕ್ಷೇಪ ನಡೆಸುವುದಾಗಿ ಆರೋಪಿಸುವ ಬಿಜೆಪಿಗೆ ಅಪಪ್ರಚಾರ ಮಾಡುವುದೇ ಉದ್ಯೋಗ. ಹಾಗೆ ತಡೆವೊಡ್ಡುತ್ತಿದ್ದರೆ,ತಾನು ಸಚಿವನಾಗಿದ್ದ ಸಂದರ್ಭ,, ಕೇಂದ್ರ ಸರಕಾರದ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್,ಸ್ಟೌವ್ ವಿತರಣೆಯನ್ನು ಯಾರು ವಿತರಿಸಿದ್ದು ಎಂದು ಪ್ರಶ್ನಿಸಿ, ಆ ಸಂದರ್ಭವೇ ತಡೆವೊಡ್ಡಲು ಅವಕಾಶವಿತ್ತು, ಇತ್ತೀಚೆಗೆ 94ಸಿ ಹಕ್ಕುಪತ್ರ ವಿತರಣೆ ವೇಳೆ ಮಾಜಿ ಶಾಸಕರೊಬ್ಬರು ಇದ್ದುದನ್ನು ಉಲ್ಲೇಖಿಸಿದ ಅವರು, ನಾನು ಅದನ್ನೂ ಪ್ರಶ್ನಿಸಿಲ್ಲ. ಏಕೆಂದರೆ ನಾನು ಜುಜುಬಿ ರಾಜಕೀಯ ಮಾಡುವುದಿಲ್ಲ ಎಂದರು.
ಮರಳು ಸಮಸ್ಯೆ:
ಗಣಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಕಠಾರಿಯಾ ಅವರು ಈ ಇಲಾಖೆಯಿಂದ ಹೋಗದೆ ಮರಳು ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ ಎಂದ ರೈ, ಹಲವು ಬಾರಿ ಜಿಲ್ಲೆಯ ಮರಳು ಸಮಸ್ಯೆಯ ಕುರಿತು ತಾನು ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ದೊರಕಿರಲಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಮರಳು ಸಮಸ್ಯೆ ಸೃಷ್ಟಿಯಾಗಿದ್ದು,ಈಗ ಅವರೇ ಪ್ರತಿಭಟನೆಗೆ ಮುಂದಾಗಿರುವುದು ದುರದೃಷ್ಟಕರ ಎಂದ ಅವರು ಮರಳು ನೀತಿ ಜಾರಿಗೆ ತನ್ನಷ್ಟು ಪ್ರಯತ್ನ ಯಾರು ಮಾಡಿಲ್ಲ ಎಂದರು.
ಯಾರೊಂದಿಗೂ ಹೊಂದಾಣಿಕೆ ಇಲ್ಲ
ಸಂಗಬೆಟ್ಟು ತಾಪಂ ಉಪಚುನಾವಣೆ ಫಲಿತಾಂಶ ಮತ್ತು ಹಿಂದಿನ ಪುರಸಭೆ ಚುನಾವಣೆ ಫಲಿತಾಂಶ ವಿಶ್ಲೇಷಿಸಿದ ಅವರು, ಕಳೆದ ವಿಧಾನಸಭೆ ಚುನಾವಣೆ ಬಳಿಕ ನಡೆದ ಪುರಸಭೆ ಮತ್ತು ತಾಪಂ ಉಪಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಕಾಂಗ್ರೆಸ್ 1500ಕ್ಕೂ ಅಧಿಕ ಮತಗಳಿಸಿದ್ದಾಗಿ ಹೇಳಿದರು. ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಸ್ಪರ್ಧಿಸಲಿದೆ, ಚುನಾವಣಾ ಪೂರ್ವ ದಲ್ಲಿ ತಿಳಿಸಿದಂತೆಕಾಂಗ್ರೆಸ್ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಲುವುದಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಮಾಜಿ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಆಲಿ, ಮಹಿಳಾ ಕಾಂಗ್ರಸ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಿ ಪಂ. ಸದಸ್ಯ ಪದ್ಮಶೇಖರ ಜೈನ್, ಪಕ್ಷದ ಮುಖಂಡರಾದ ಪದ್ಮನಾಭ ರೈ, ಬಿ.ಎಚ್.ಖಾದರ್, ಬಿ.ಕೆ.ಇದ್ದಿನಬ್ಬ, ಸಂಜೀವ ಪೂಜಾರಿ, ಜನಾರ್ದನ ಚಂಡ್ತಿಮಾರ್ ಮೊದಲಾದವರಿದ್ದರು.