ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ 35ನೆ ವರ್ಷದ “ಅಟಲ್‌ಜೀ ಪ್ರಶಸ್ತಿ-ಸ್ವಸ್ತಿಕ್ ಪ್ರೋ ಕಬಡ್ಡಿ ಉತ್ಸವ” ನ. 24 ಮತ್ತು 25 ರಂದು ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಸಂಸ್ಥಾಪಕ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ.
ಅವರು ಶನಿವಾರ ರಾತ್ರಿ ಪುಂಜಾಲಕಟ್ಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಹೊನಲು ಬೆಳಕಿನ ಈ ಪಂದ್ಯಾಟದಲ್ಲಿ ಪುರುಷರ ಮುಕ್ತ ವಿಭಾಗ ಮತ್ತು 60 ಕೆ.ಜಿ. ವಿಭಾಗ ಹಾಗೂ ಜಿಲ್ಲಾ ಮಟ್ಟದ ಹೈಸ್ಕೂಲ್, ಪಿಯುಸಿ ವಿಭಾಗದ ಬಾಲಕ ಬಾಲಕಿಯರ ಪ್ರೊ.ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದರು.
ಉದ್ಘಾಟನಾ ದಿನದಂದು ಬೆಳಿಗ್ಗೆ ಬಿಲ್ಲವ ಸಂಘ ಮತ್ತು ವಿಷ್ಣು ಮೂರ್ತಿ ಯುವಕ ಸಂಘದ ವತಿಯಿಂದ ಹಾಗೂ ಶ್ರೀ ರಾಮ ಭಜನಾಮಂದಿರ ನಯನಾಡು ಇವರ ನೇತೃತ್ವದಲ್ಲಿ ಬಡಗಕಜೆಕಾರು ಗ್ರಾಮದ ಮಾಡದಿಂದ ಕ್ರೀಡಾ ಜ್ಯೋತಿ ಮೆರವಣಿಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನಕ್ಕೆ ಬರಲಿದೆ. ಪುರುಷರ ಮುಕ್ತ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಆಟಗಾರರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ವಿಜೇತ ತಂಡಕ್ಕೆನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾಪಟುಗಳನ್ನು ಮತ್ತು ತೀರ್ಪಗಾರರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಡಿಜಿಟಲ್ ಬೋರ್ಡ್ ಅಳವಡಿಸಿ ಅಮೂಲಕ ಕಬಡ್ಡಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಮಂಗಳೂರು ಸಂಸದ ನಳಿನ್ ಕುಮಾರ್, ಶಾಸಕ ರಾಜೇಶ್ ನಾಯಕ್ ಸಹಿತ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಬಡ್ಡಿ ಪಂದ್ಯಾಟದ ತಾಂತ್ರಿಕ ವಿಭಾಗದ ಮುಖ್ಯಸ್ಥ ಫ್ರಾನಿಸ್ಸ್, ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಎಂ. ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಸಂಚಾಲಕ ರಾಜೇಶ್ ಪುಲಿಮಜಲು, ಸಹಸಂಚಾಲಕ ಅಬ್ದುಲ್ ಹಮೀದ್ ಮಲ್ಪೆ ಉಪಸ್ಥಿತರಿದ್ದರು.