ಶ್ರೀರಾಮಚಂದ್ರಾಪುರ ಮಠದ ರಕ್ಷಣೆ ನಮ್ಮ ಹೊಣೆ, ಮಠದ ವಿರುದ್ಧ ನಡೆಯುವ ಯಾವುದೇ ಷಡ್ಯಂತ್ರಗಳನ್ನು ಎದುರಿಸಿ ನಿಲ್ಲುವ ಶಕ್ತಿ ಶಿಷ್ಯಸಮೂಹಕ್ಕಿದ್ದು, ಸಂಘಟನೆಯಿಂದ ಸಾಧನೆ ಸಾಧ್ಯ ಎಂದು ಭಾನುವಾರ ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆದ ಸಂರಕ್ಷಣಾ ಸಮಾವೇಶದಲ್ಲಿ ಆಗಮಿಸಿದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಾಹ್ನದ ಬಳಿಕ ನಡೆದ ಸಭೆಯಲ್ಲಿ ಹೊನ್ನಾವರ, ಕುಮಟ, ಸಾಗರ, ಶಿವಮೊಗ್ಗ, ಹೊಸನಗರ, ಬೆಂಗಳೂರು, ದಕ್ಷಿಣ ಕನ್ನಡ ಭಾಗದ 5 ಸಾವಿಕ್ಕೂ ಅಧಿಕ ಮಂದಿ ಮಠದ ಶಿಷ್ಯ ಭಕ್ತರು ಭಾಗವಹಿಸಿದ್ದರು.
ಸಮಾಜ ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಷಡ್ಯಂತ್ರಗಳಿಗೆ ಶ್ರೀಮಠದ ಶಿಷ್ಯ ಭಕ್ತರು ವಿಚಲಿತರಾಗಿಲ್ಲ. ಸಂಘಟನೆಯಿಂದ ಸಾಧನೆ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ, ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಸಂಭೋದನೆಯಂತೆ ಕೆಲಸಗಳು ನಡೆಯುತ್ತಿದೆ. ಮೇವು ಬ್ಯಾಂಕ್, ಗೋ ಬ್ಯಾಂಕ್, ಗೋ ಸಂಜೀವಿನಿ ಯೋಜನೆಯ ಮೂಲಕ ಮಠ ವಿಶಿಷ್ಟ ಸಂಚಲನವನ್ನು ಮೂಡಿಸಿದೆ ಎಂದು ಭಾಷಣಕಾರರು ಅಭಿಪ್ರಾಯಪಟ್ಟರು. ಗೋಕರ್ಣ ಮಂಡಲಾಧೀಶ್ವರ ಎಂಬ ಬಿರುದು ಶ್ರೀ ಪೀಠಕ್ಕೆ ಇದೆ. ತಾಮ್ರಶಾಸನದಲ್ಲಿ ಗೋಕರ್ಣ ದೇವಾಲಯ ಶ್ರೀಮಠಕ್ಕೆ ಇತ್ತೆಂಬ ಉಲ್ಲೇಖವಿದೆ. ಆದ ಕಾರಣ ಗೋಕರ್ಣ ದೇವಾಲಯ ನಮ್ಮ ಭಿಕ್ಷೆಯಲ್ಲ, ನಮ್ಮ ಹಕ್ಕು ಎಂದು ಅವರು ಪ್ರತಿಪಾದಿಸಿದರು.
ಹವ್ಯಕ ಸಮಾಜ ಮತ್ತು ಶ್ರೀರಾಮಚಂದ್ರಾಪುರ ಮಠದ ಪ್ರಮುಖರಾದ ಜಗದೀಶ ಶರ್ಮಾ, ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ, ಡಾ. ವೈ.ವಿ.ಕೃಷ್ಣಮೂರ್ತಿ, ನ್ಯಾಯವಾದಿ ಮಹೇಶ್ ಕಜೆ, ರವೀಂದ್ರ ಭಟ್ ಸೂರಿ, ಡಾ. ಗಜಾನನ ಶರ್ಮಾ, ಶಂಭು ಶರ್ಮ, ಈಶ್ವರೀ ಬೇರ್ಕಡವು, ಲಲಿತಾಲಕ್ಷ್ಮೀ ಭಟ್, ಕೃಷ್ಣಾನಂದಶರ್ಮಾ, ಪ್ರವೀಣ ಭೀಮನಕೋಣೆ, ಕೇಶವ ಭಟ್ ಕೂಟೇಲು, ಜಯರಾಮ ಕೋರಿಕ್ಕಾರು, ಮುರಳಿ ಹಸಂತಡ್ಕ ವಿಚಾರ ಮಂಡಿಸಿದರು.
ಎಂ. ಹರನಾಥರಾವ್ ಸಾಗರ, ಜಿ.ಕೆ. ಹೆಗಡೆ ಗೋಳಗೋಡು, ಆರ್. ಎಸ್. ಹೆಗಡೆ ಹರಗಿ, ಪಡೀಲು ಮಹಾಬಲ ಭಟ್, ಆರ್. ಎಂ. ಹೆಗಡೆ ಬಾಳೇಸರ, ಬಿ. ಜಿ. ರಾಮ ಭಟ್, ಕಾಂತಾಜೆ ಈಶ್ವರ ಭಟ್, ಶೇಷಗಿರಿ ಭಟ್ ಸಿಗಂದೂರು, ಶಿಥಿ ಕಂಠ ಭಟ್ ಹಿರೇ ಗೋಕರ್ಣ, ಹಾರೆಕರೆ ನಾರಾಯಣ ಭಟ್, ಡಾ. ಜಯಗೋವಿಂದ, ಅ. ಪು ನಾರಾಯಣಪ್ಪ ಸಾಗರ, ಪ್ರಕಾಶ ಭಟ್ ಮುಂಬೈ, ಪಳ್ಳತ್ತಡ್ಕ ಪರಮೇಶ್ವರ ಭಟ್, ವೇಣು ವಿಘ್ನೇಶ, ಹರಿಪ್ರಸಾದ್ ಪೆರಿಯಾವು, ವಿವಿಧ ಕಡೆಗಳಿಂದ ಆಗಮಿಸಿದ ಮುಖಂಡರು ಉಪಸ್ಥಿತರಿದ್ದರು.