ಫ್ಯಾಸಿಷ್ಟ್ ಶಕ್ತಿಗಳು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ ಗುಂಪುಹತ್ಯೆ ಮಾಡುತ್ತಿದೆ ಎಂದು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಆರೋಪಿಸಿದ್ದಾರೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ.ರೋಡಿನ ಗೂಡಿನಬಳಿ ಸಮುದಾಯ ಭವನದಲ್ಲಿ ಶುಕ್ರವಾರ ರಾತ್ರಿ ನಡೆದ ಪಕ್ಷದ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವರ್ಷಕ್ಕೆ 30ಕ್ಕೂ ಹೆಚ್ಚು ಗುಂಪು ಹತ್ಯಾ ಪ್ರಕರಣಗಳು ಬೆಳಕಿದೆ ಬಂದಿದ್ದು, ಅಲ್ಪಸಂಖ್ಯಾತ ಸಮುದಾಯವನ್ನು ಒಂದು ರೀತಿಯ ಭಯದ ವಾತಾವರಣದಲ್ಲಿ ಜೀವಿಸುವಂತೆ ಮಾಡುವುದು ಮುಖ್ಯ ಉದ್ದೇಶ ಎಂದು ಅವರು ಹೇಳಿದರು.
ಎಸ್ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಚುನಾವಣೆಗೆ ಜಾತ್ಯತೀತ ಶಕ್ತಿಗಳು ಒಂದು ಗೂಡಿಸುವ ಕೆಲಸವಾಗಬೇಕಿದೆ. ಅದಲ್ಲದೆ, ಜನರನ್ನು ಜಾಗೃತಿ ಹಾಗೂ ಒಗ್ಗೂಡಿಸುವ ಪ್ರಯತ್ನ ಎಸ್ಡಿಪಿಐಯಿಂದ ಮಾತ್ರ ಸಾಧ್ಯ ಎಂದವರು, ಯಾವುದೇ ಬೆಲೆತೆತ್ತಾದರೂ ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಬೇಕು ಎಂದರು.
ವೇದಿಕೆಯಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಉಪಸ್ಥಿತರಿದ್ದರು. ಕ್ಷೇತ್ರ ಕಾರ್ಯದರ್ಶಿ ಇಸ್ಮಾಯಿಲ್ ಬಾವ ಸ್ವಾಗತಿಸಿ, ಸದಸ್ಯ ಕಲಂದರ್ ವಂದಿಸಿ, ಉಪಾಧ್ಯಕ್ಷ ಕಲಂದರ್ ಪರ್ತಿಪ್ಪಾಡಿ ನಿರೂಪಿಸಿದರು.