ಪುತ್ತೂರು ಪೋಳ್ಯದಲ್ಲಿ ಮನೆಯಲ್ಲಿ ನಾಡಬಾಂಬ್ ಸ್ಪೋಟಿಸಿದ ಪ್ರಕರಣದ ಆರೋಪಿಯನ್ನು ಪುತ್ತೂರು ಪೊಲೀಸರು ಕೇರಳದ ಎರ್ನಾಕುಳಂ ನಿಂದ ಬಂಧಿಸಿದ್ದಾರೆ. ಬಾಬು ಯಾನೆ ಬಾಲನ್ ಯಾನ್ ಬಾಲ ಚೇಟನ್ ಮೂಲತ: ಕೇರಳದವನು.
ಅ.15ರಂದು ಪುತ್ತೂರು ಸಮೀಪ ಪೋಳ್ಯದ ನಾರಾಯಣ ಪ್ರಸಾದ್ ಎಂಬವರ ಮನೆಯಲ್ಲಿ ಈ ಘಟನೆ ಸಂಭವಿಸಿತ್ತು. ರಾತ್ರಿ 2 ಗಂಟೆಗೆ ಹೊರಗೆ ಸದ್ದು ಕೇಳಿದಾಗ ನಾರಾಯಣ ಪ್ರಸಾದ್, ಶಾಲಿನಿ ದಂಪತಿಗೆ ಎಚ್ಚರವಾಗಿತ್ತು. ಮನೆಯ ಸಿಟೌಟ್ ಗೆ ಕಾಲಿಡುವಷ್ಟರಲ್ಲಿ ಕಾಲ ಬುಡದಲ್ಲೇ ನಾಡ ಬಾಂಬ್ ಸ್ಫೋಟಿಸಿತ್ತು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾನೆ ಪೊಲೀಸರು ಬಂದು ತನಿಖೆ ನಡೆಸಿದಾಗ ಮನೆಯ ಸುತ್ತ ಎರಡು ಜೀವಂತ ಬಾಂಬ್ ಪತ್ತೆಯಾಗಿತ್ತು.
ಸ್ಫೋಟ ನಡೆದ ಸಂದರ್ಭ, ನಾರಾಯಣ ಪ್ರಸಾದ್ ರವರ ಮನೆಯಲ್ಲಿ ಸುಮಾರು 3 ತಿಂಗಳ ಹಿಂದೆ ಕೆಲಸಕ್ಕೆ ಇದ್ದ ಬಾಬು ಯಾನೆ ಬಾಲು ಎಂಬಾತನನ್ನು ಕೆಲಸದಿಂದ ತೆಗೆದು ಹಾಕಿದ ದ್ವೇಷದಿಂದ ಈ ಕೃತ್ಯವನ್ನು ಎಸಗಿರುವ ಬಗ್ಗೆ ಶಂಕೆಯಿದ್ದು ಪರಾರಿಯಾಗಿರುವ ಆರೋಪಿಯ ಪತ್ತೆಯ ಬಗ್ಗೆ ತಂಡ ರಚಿಸಲಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ತಿಳಿಸಿದ್ದರು.
ಹಿಂದೆ ಕೆಲಸಕ್ಕೆ ಹಾಗೂ ಮನೆಯಲ್ಲಿ ವಾಸವಾಗಿದ್ದ ಬಾಬು ಯಾನೆ ಬಾಲನ್ ನನ್ನು ತೆಗೆದು ಹಾಕಿದ ಹಿನ್ನೆಲೆಯಲ್ಲಿ ಮನೆಯವರ ಕುರಿತು ದ್ವೇಷ ಮೂಡಿ ಈ ಕೃತ್ಯ ಎಸಗಿದನೇ ಎಂಬುದು ಇನ್ನಷ್ಟೇ ತನಿಖೆಯಿಂದ ತಿಳಿದುಬರಬೇಕಾಗಿದೆ.