ಅ. 28ರಂದು ನಡೆಯುವ ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿ ಇವಿಎಂ ಮತಯಂತ್ರ ಅಳವಡಿಕೆ ಹಾಗೂ ಪರಿಶೀಲನಾ ಕಾರ್ಯ ನಡೆಯಿತು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಚುನಾವಣಾಧಿಕಾರಿ ನಾರಾಯಣ ಶೆಟ್ಟಿ, ಮಾಸ್ಟರ್ ಟ್ರೈನರ್ ನಾರಾಯಣ ಭಂಡಾರಿ, ಸಹಾಯಕ ಚುನಾವಣಾಧಿಕಾರಿ ಲಕ್ಷ್ಮಣ್, ಮತಗಟ್ಟೆಯ ಸೆಕ್ಟರ್ ಅಧಿಕಾರಿ ಮತ್ತಡಿ ಇವಿಎಂ ಮತಯಂತ್ರ ಅಳವಡಿಕಾ ಕಾರ್ಯದಲ್ಲಿ ತೊಡಗಿಕೊಂಡರು.
ಒಟ್ಟು 10 ಬೂತ್‌ಗಳಲ್ಲಿ ಚುನಾವಣೆಯಲ್ಲಿ ನಡೆಯಲಿದೆ. ಎರಡು ಸಾಮಾನ್ಯ ಮತಗಟ್ಟೆಗಳನ್ನು ಹೊರತು ಪಡಿಸಿದರೆ ಉಳಿದ ೮ ಮತಗಳು ಸೂಕ್ಷ್ಮ ಮತಗಟ್ಟೆಗಳಿವೆ ಎಂದು ತಹಶೀಲ್ದಾರ್ ಅವರು ಮಾಹಿತಿ ನೀಡಿದರು.
ಸಂಗಬೆಟ್ಟು ಕ್ಷೇತ್ರದಲ್ಲಿ 4685 ಪುರುಷರು, 4767 ಮಹಿಳೆಯರು ಸೇರಿ ಒಟ್ಟು 9453 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವರು. ಚುನಾವಣೆಗೆ ತಾಲೂಕಾಳಿತ ಸಕಲ ಪೂರ್ವತಯಾರಿಯನ್ನು ಮಾಡಿಕೊಂಡಿದ್ದು, ಶಾಂತ ಮತದಾನಕ್ಕೆ ಸಿದ್ಧತೆಯನ್ನು ನಡೆಸಿದೆ ಎಂದು ತಹಶೀಲ್ದಾರ್ ಅವರು ಮಾಹಿತಿ ನೀಡಿದ್ದಾರೆ.
ಯಾಕಾಗಿ ಚುನಾವಣೆ?
ವಿಧಾನಸಭೆಯ ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆ ಹತ್ತಿರ ಇದೆ ಎನ್ನುವಾಗ ಆಳುವ ಪಕ್ಷ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಸ್ಥಳೀಯ ಶಾಸಕ ಬಿ.ರಮಾನಾಥ ರೈ ಜೊತೆಜೊತೆಗೇ ಇದ್ದ ಪ್ರಭಾಕರ ಪ್ರಭು ತಾಪಂ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದು ದೊಡ್ಡ ಸಂಚಲನ ಮೂಡಿಸಿತ್ತು.
ಬಿ.ಸಿ.ರೋಡಿನ ರಂಗೋಲಿ ಹೋಟೆಲ್ ನಲ್ಲಿ ಪಕ್ಷದ ಪ್ರಮುಖರ ಸಮ್ಮುಖ ಬಿಜೆಪಿ ಸೇರಿದ್ದ ಪ್ರಭಾಕರ ಪ್ರಭು, ಬಳಿಕ ರಾಜೇಶ್ ನಾಯ್ಕ್ ಅವರೊಂದಿಗೆ ಗುರುತಿಸಿಕೊಂಡರು.
ಅವರ ಈ ನಡೆಯಿಂದ ತೆರವಾಗಿದ್ದ ತಾಲೂಕು ಪಂಚಾಯತ್ ಸ್ಥಾನಕ್ಕೆ ಈಗ ಮತ್ತೆ ಉಪಚುನಾವಣೆಯ ಸನ್ನಿವೇಶ ಬಂದಿದೆ. ಅಕ್ಟೋಬರ್ 28ರಂದು ಓಟು, 31ರಂದು ಕೌಂಟಿಂಗ್.
ವಿಶೇಷವೆಂದರೆ ಅಂದು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ ಪ್ರಭಾಕರ ಪ್ರಭು, ಈಗ ಕಮಲದ ಚಿಹ್ನೆಗೆ ಮತ ಯಾಚಿಸುತ್ತಿದ್ದಾರೆ. ಒಂದು ಕಾಲದಲ್ಲಿ ಅವರೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿ ಓಡಾಡುತ್ತಿದ್ದ ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷ ದಿನೇಶ ಸುಂದರ ಶಾಂತಿ ಕಾಂಗ್ರೆಸ್ ಪರವಾಗಿ ಅಭ್ಯರ್ಥಿಯಾಗಿ ಮತ ಯಾಚನೆ ಮಾಡುತ್ತಿದ್ದಾರೆ.
ವರಿಷ್ಠರ ದಂಡು:
ಬಿಜೆಪಿಯಿಂದ ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಸಭೆಗಳನ್ನು ನಡೆಸಿದ್ದರೆ, ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ತಾಪಂ ಸ್ಥಾನ ಉಳಿಸಲು ಶತಪ್ರಯತ್ನ ನಡೆಸುತ್ತಿದೆ.