ರೋಟರಿ ಕ್ಲಬ್ ಬಂಟ್ವಾಳ ಟೌನ್ ಗೆ ರೋಟರಿ ಜಿಲ್ಲಾ ಗರ್ವನರ್ ಅಧಿಕೃತ ಭೇಟಿ ಕಾರ್ಯಕ್ರಮ ಅ.23ರಂದು ನಡೆಯಲಿದ್ದು, ಈ ಸಂದರ್ಭ ನಾನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ಕ್ಲಬ್ ಅಧ್ಯಕ್ಷ ಉಮೇಶ್ ನಿರ್ಮಲ್ ಹೇಳಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಸಂಜೆ ಮಾತನಾಡಿದ ಅವರು, ಜಿಲ್ಲಾ ಗವರ್ನರ್ ರೋಹಿನಾಥ ಪಾದೆ ಅಧಿಕೃತ ಕಾರ್ಯಕ್ರಮ ಸಂದರ್ಭ ಅಂಗನವಾಡಿಗಳಿಗೆ ನೆರವು ನೀಡುವ ಆಶಾಸ್ಫೂರ್ತಿ ಯೋಜನೆಯಡಿ ತುಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಮತ್ತು ಬೊಳ್ಳಾರಿ ಅಂಗನವಾಡಿಗಳಿಗೆ ನೆರವು ನೀಡುವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಒಟ್ಟು 10 ಅಂಗನವಾಡಿಗಳಿಗೆ ಸವಲತ್ತು ನೀಡಲಾಗುವುದು. ಸಂಜೆ 4 ಗಂಟೆಗೆ ದೀಪಿಕಾ ಪ್ರೌಢಶಾಲೆ ಮೊಡಂಕಾಪಿನಲ್ಲಿ ನೂತನ ಶೌಚಾಲಯ ಉದ್ಘಾಟನೆ, 5 ಗಂಟೆಗೆ ರೋಟರಿ ಗೋಲ್ಡನ್ ಜ್ಯುಬಿಲಿ ಹಾಲ್ ನಲ್ಲಿ ಕ್ಲಬ್ ಅಸೆಂಬ್ಲಿ ಮತ್ತು 6.30ಕ್ಕೆ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯುವುದು. ಈ ಸಂದರ್ಭ ಕೊಡಗಿನ ಸಂತ್ರಸ್ತರಿಗೆ ಟೌನ್ ಸದಸ್ಯರ 1 ಲಕ್ಷ ರೂಸಹಾಯಧನ ಹಸ್ತಾಂತರ, ಗೃಹಪತ್ರಿಕೆ ಲೋಕಾರ್ಪಣೆ, ಫರಂಗಿಪೇಟೆಯಲ್ಲಿ ನೂತನ ಕ್ಲಬ್ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು. ಅಧ್ಯಕ್ಷತೆಯಲ್ಲಿ ಕ್ಲಬ್ ಅಧ್ಯಕ್ಷ ಉಮೇಶ್ ನಿರ್ಮಲ್ ವಹಿಸುವರು.
ಮುಖ್ಯ ಅತಿಥಿಗಳಾಗಿ ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ ಕಾರಂತ್, ವಲಯ ಸೇನಾನಿ ಸಂಜೀವ ಪೂಜಾರಿ ಗುರುಕೃಪ, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ ಭಾಗವಹಿಸುವರು ಎಂದರು. ಈ ಸಂದರ್ಭ ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಕಾರ್ಯದರ್ಶಿ ಜಯರಾಜ್ ಎಸ್. ಬಂಗೇರ, ಪಬ್ಲಿಕ್ ಇಮೇಜ್ ನಿರ್ದೇಶಕ ಸುರೇಶ್ ಸಾಲಿಯಾನ್, ಸಾರ್ವಜನಿಕ ಸಂಪರ್ಕ ನಿರ್ದೇಶಕ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.