ಜಿಲ್ಲಾ ಸುದ್ದಿ

ಪುತ್ತೂರು ತುಳು ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ

ನವೆಂಬರ್ 3ರಂದು ಪುತ್ತೂರಿನ ಸುದಾನ ಶಾಲೆಯ ವಠಾರದಲ್ಲಿ ನಡೆಯುವ ಪುತ್ತೂರು ತಾಲೂಕು ತುಳು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಗುರವಾರ ಇಲ್ಲಿನ ಬಂಟರ ಭವನದಲ್ಲಿ ಬಿಡುಗಡೆ ಮಾಡಲಾಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ .ಸಿ. ಭಂಡಾರಿ ಮತ್ತು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಸವಣೂರು ಸೀತಾರಾಮ ರೈ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಕರಾವಳಿ ಜಿಲ್ಲೆಗಳಲ್ಲಿ ವಾಸಿಸುವ ಜನ ಯಾವುದೇ ಭಾಷೆ ಮಾತನಾಡಿದರೂ ನಾವೆಲ್ಲರೂ ಸಾಂಸ್ಕೃತಿಕವಾಗಿ ತುಳುವರು. ತುಳು ಕೇವಲ ಒಂದು ಭಾಷೆಯಲ್ಲ. ಮಣ್ಣಿನ ಜೀವನಕ್ರಮವಾಗಿದೆ. ಹೀಗಾಗಿ ತುಳು ಭಾಷೆ ಮತ್ತು ಸಾಹಿತ್ಯಕ್ಕೆ ಉತ್ತೇಜನ ನೀಡಲು ನಡೆಸುವ ಸಮ್ಮೇಳನ ಪರೋಕ್ಷವಾಗಿ ತುಳು ಸಂಸ್ಕೃತಿಯನ್ನು ಬೆಳೆಸುತ್ತದೆ. ಈಗಾಗಲೇ ಬಂಟ್ವಾಳದಲ್ಲಿ ತುಳು ಸಮ್ಮೇಳನ ನಡೆಸಲಾಗಿದೆ. ಬಾರಿ ಸುಳ್ಯ ಮತ್ತು ಪುತ್ತೂರುಗಳಲ್ಲಿ ನಡೆಯಲಿದೆ. ಇದು ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂಬ ಆಶಾವಾದ ಇದೆ ಎಂದು .ಸಿ. ಭಂಡಾರಿ ನುಡಿದರು.

ಪುತ್ತೂರಿನಲ್ಲಿ ಸ್ವಾಗತ ಸಮಿತಿಯ ನೇತೃತ್ವದಲ್ಲಿ ನಡೆದಿರುವ ಸಿದ್ಧತೆ ಖುಷಿ ತಂದಿದೆ. ಕಾರ್ಯಕ್ರಮಗಳ ಪಟ್ಟಿ ನೋಡಿದ್ದೇನೆ. ಎಲ್ಲವೂ ಅಚ್ಚುಕಟ್ಟಾಗಿದೆ. ತುಳು ಅಕಾಡೆಮಿ ಎಂದರೆ ತುಳುವರದೇ ಸಂಸ್ಥೆ. ಸರಕಾರದ ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದು, ಅದರ ಪ್ರಕಾರ ಸಮ್ಮೇಳನಕ್ಕೆ ಸರ್ವ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ಮಾತನಾಡಿ, ಪುತ್ತೂರಿನಲ್ಲಿ ತಾಲೂಕು ಮಟ್ಟದ ಸಮ್ಮೇಳನ ಮೊದಲ ಬಾರಿ ನಡೆಯುತ್ತಿದೆ. ಹತ್ತು ಲಕ್ಷ ರೂ. ಬಜೆಟ್ ಬೇಕಾಗುತ್ತದೆ. ಇದರ ಕ್ರೋಡೀಕರಣಕ್ಕೆ ಎಲ್ಲ ತುಳು ಪ್ರೇಮಿಗಳು ಸಹಕಾರ ನೀಡಬೇಕು ಎಂದರು. ಸಮ್ಮೇಳನವನ್ನು ವೈವಿಧ್ಯಮಯವಾಗಿ ನಡೆಸಲು ಸಿದ್ಧತೆ ಮಾಡಲಾಗುತ್ತದೆ. ೧೩ಕ್ಕೂ ಅಧಿಕ ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನಕ್ಕೆ ಮೊದಲು ತಾಲೂಕು ಮಟ್ಟದಲ್ಲಿ ತುಳು ಜನಪದ ಕ್ರೀಡಾ ಕೂಟ ಮತ್ತು ಸಾಹಿತ್ಯ ಸ್ಪರ್ಧೆ ನಡೆಯಲಿದೆ. ಸಮ್ಮೇಳನದ ಉದ್ಘಾಟನೆಗೆ ಮುನ್ನ ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನಿಂದ ಸುದಾನ ಶಾಲೆಗೆ ಅಪ್ಪಟ ತುಳು ಸಂಸ್ಕೃತಿ ಬಿಂಬಿಸುವ ಆಕರ್ಷಕ ತುಳು ದಿಬ್ಬಣ ನಡೆಯಲಿದೆ. ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭ, ಕವಿಗೋಷ್ಠಿ, ವಿಚಾರಗೋಷ್ಠಿ, ಚಿಂತನ ಮಂಥನ, ಹಾಸ್ಯ ಸಂಭ್ರಮ, ಸಂಗೀತ ಸಂಭ್ರಮ, ತಾಳಮದ್ದಳೆ ಇತ್ಯಾದಿ ನಡೆಯಲಿದೆ. ಇದಲ್ಲದೆ ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ, ಮಕ್ಕಳಿಗೆ ನಿರಂತರ ತುಳು ಆಟೋಟ, ತುಳು ಆಹಾರ ಪ್ರದರ್ಶನ, ತುಳು ಸಾಂಸ್ಕೃತಿಕ ಲೋಕ ಅನಾವರಣ ನಡೆಯಲಿದೆ. ಒಂದು ದಿನದ ಸಮ್ಮೇಳನ ಸಂಪೂರ್ಣ ತುಳು ಬದುಕಿನ ಅನಾವರಣವಾಗಲಿದೆ. ಇದರೊಂದಿಗೆ ಸಾಹಿತ್ಯಿಕ ಮಂಥನ ನಡೆಯಲಿದೆ ಎಂದರು.

ಆರ್ಥಿಕ ಸಮಿತಿ, ಆಹಾರ ಸಮಿತಿ, ಪ್ರಚಾರ ಸಮಿತಿ, ಮಾಹಿತಿ ಕೇಂದ್ರ, ಮಹಿಳಾ ಸಮಿತಿ, ಜನಪದ ಕ್ರೀಡಾ ಸಮಿತಿ, ವಸ್ತು ಪ್ರದರ್ಶನ ಸಮಿತಿ, ಕಾರ್ಯಕ್ರಮ ಸಂಯೋಜನೆ, ಅಲಂಕಾರ, ವೇದಿಕೆ, ಸ್ವಾಗತ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ ಸೇರಿದಂತೆ ಎಲ್ಲ ಉಪ ಸಮಿತಿಗಳ ಸಂಚಾಲಕರು ಸಿದ್ಧತೆ ಬಗ್ಗೆ ವಿವರ ಮಾಹಿತಿ ನೀಡಿದರು.

ಸಮ್ಮೇಳನ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ರೆ.ವಿಜಯ ಹಾರ್ವಿನ್, ಕೋಶಾಧಿಕಾರಿ ರಾಮಣ್ಣ ಗೌಡ ಗುಂಡೋಳೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜನಾರ್ದನ್, ತುಳು ಅಕಾಡೆಮಿ ಸದಸ್ಯ ಗೋಪಾಲ ಅಂಚನ್ ಉಪಸ್ಥಿತರಿದ್ದರು. ಶಾಂತಾ ಕುಂಟಿನಿ ಪ್ರಾರ್ಥಿಸಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಮಠಂತಬೆಟ್ಟು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜನ ಸಮಿತಿಯ ಕುಂಬ್ರ ದುರ್ಗಾಪ್ರಸಾದ ರೈ ಸಹಕರಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts