ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷ ವಿದ್ಯಾರ್ಥಿನಿಯರಿಗೆ ಸಂಬಂಧಿಸಿ ಉತ್ಥಾನ ಎಂಬ ಬಾಲಿಕಾ ರಾಷ್ಟ್ರೀಯತ ಶಿಬಿರವನ್ನು ಸುಳ್ಯ ತಾಲೂಕು ರಾಷ್ಟ್ರ ಸೇವಿಕಾ ಸಮಿತಿಯ ಸಹಕಾರ್ಯವಾಹಿಕೆಯಾದ ಶ್ರೀದೇವಿ ನಾಗರಾಜ್ ಭಟ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ತರಗತಿ ಕೇವಲ ತಮ್ಮ ಸಂಪಾದನೆಗಾಗಿ ಸೀಮಿತವಾಗಿದ್ದು, ಇಂತಹ ಸಂಸ್ಕಾರ ಶಿಬಿರಗಳು ಇನ್ನೊಬ್ಬರಿಗಾಗಿ, ಪರೋಪಕಾರಕ್ಕಾಗಿ ಇರುತ್ತವೆ. ಮಹಿಳೆ ಕೇವಲ ತನ್ನ ಸ್ವಾರ್ಥವನ್ನು ಕಾಣದೆ ಎಲ್ಲರನ್ನು ರಕ್ಷಿಸಿದ ಬಗೆಯಂತೆ ಸಂಸ್ಕಾರಗಳು ಎಲ್ಲರಲ್ಲೂ ಸುಪ್ತವಾಗಿದ್ದು ಅದನ್ನು ಒರೆಗೆ ಹಚ್ಚುವ ಕಾರ್ಯ ಇಂತಹ ಶಿಬಿರದಿಂದಾಗಲಿ ಎಂದರು.
ಭಾರತೀಯ ಶಿಕ್ಷಣ ಪದ್ಧತಿಯ ಹಿನ್ನೆಲೆಯಂತೆ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರವನ್ನು ನೀಡುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಾರೀರಿಕ ಶಕ್ತಿ, ಪ್ರಾಣಶಕ್ತಿ, ಮನೋಶಕ್ತಿ, ಆಧ್ಯಾತ್ಮಿಕ ಶಕ್ತಿ, ಬೌದ್ಧಿಕ ಶಕ್ತಿಗಳು ಬೆಳೆದಾಗ ಪೂರ್ಣ ಪ್ರಮಾಣದ ವಿಕಾಸ ಸಾಧ್ಯ. ಬದಲಾವಣೆಯನ್ನು ಯಾವ ಹಂತದಲ್ಲಿ ರೂಢಿಸಿಕೊಳ್ಳಬೇಕು, ನಡವಳಿಕೆ ಹೇಗೆ ಮೈಗೂಡಿಸಿಕೊಳ್ಳಬೇಕು, ಸಮಯದ ಸದುಪಯೋಗ, ಸಮಾಜದ ಮಧ್ಯೆ ಹೇಗಿರಬೇಕು ಎಂದು ಈ ಶಿಬಿರವು ತಿಳಿಸಿಕೊಡುವುದರಿಂದ ಈ ಶಿಬಿರವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಿ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಶಿಬಿರಾಧಿಕಾರಿಯಾದ ಮುಂಡಾಜೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ, ಡಾ| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ವಸಂತ ಬಲ್ಲಾಳ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಶಿಬಿರದ ಕಾರ್ಯವಾಹಿಕಾ ಸುಕನ್ಯಾ ಸ್ವಾಗತಿಸಿ, ಜಯಲಕ್ಷ್ಮೀ ಕೆ, ವಂದಿಸಿ, ಚೈತನ್ಯಾ ಕಾರ್ಯಕ್ರಮ ನಿರೂಪಿಸಿದರು.