ಟಿಪ್ಪರ್ ವಾಹನದಲ್ಲಿ ತ್ಯಾಜ್ಯ ತಂದು ಬಂಟ್ವಾಳ ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಸ ಸುರಿಯುವವರ ಮೇಲೆ ಪುರಸಭೆ ದಂಡ ವಿಧಿಸಿದೆ.
ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರು ಸ್ಥಳ ಪರಿಶೀಲನೆ ಮಾಡಿದ ಸಂದರ್ಭ ಟೆಂಪೋದಲ್ಲಿ ತ್ಯಾಜ್ಯವನ್ನು ಬಿ.ಮೂಡ ಗ್ರಾಮದ ಲಯನ್ಸ್ ಕ್ಲಬ್ ಎದುರುಗಡೆ ಸುರಿದಿರುವುದು, ಕೈಕಂಬ ಮೊಡಂಕಾಪು ರಸ್ತೆಬದಿಗಳಲ್ಲಿ ಬಸ್, ಬೈಕ್ ಮತ್ತಿತರ ವಾಹನಗಳಲ್ಲಿ ಸುರಿದಿರುವುದು, ಬಿ.ಮೂಡ ಗ್ರಾಮದ ಆಲಡ್ಕ ಪ್ರದೇಶದಲ್ಲಿ ವಾಹನಗಳಲ್ಲಿ ತ್ಯಜ್ಯಗಳನ್ನು ತಂದು ಹಾಕಿ ಪರಿಸರವನ್ನು ಮಾಲಿನ್ಯ ಮಾಡಿದ್ದು ಕಂಡುಬಂದಿದ್ದು, ಪುರಸಭಾ ವ್ಯಾಪ್ತಿಯ ಹೊರಗಡೆಯಿಂದಲೂ ತ್ಯಾಜ್ಯವನ್ನು ತಂದು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಎಲ್ಲರಿಗೂ ಪುರಸಭೆಯಿಂದ ತಲಾ ೫ ಸಾವಿರ ರೂ ದಂಡ ವಿಧಿಸಿದ್ದು, ತ್ಯಾಜ್ಯ ವಸ್ತುಗಳನ್ನು ಎಸೆಯುವ ವಾಹನಗಳ ಛಾಯಾಚಿತ್ರ ತೆಗೆಯಲಾಗಿದೆ. ಇವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಕೇಸು ದಾಖಲಿಸಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿ, ಬಿ.ಸಿ.ರೋಡು, ಬಂಟ್ವಾಳ ಇವರಿಗೆ ಈ ಬಗ್ಗೆ ಮಾಹಿತಿ ನೀಡಿ ಈ ವಾಹನಗಳ ಮೇಲೆ ದಂಡ ವಿಧಿಸಬೇಕೆಂದು ಸೂಚಿಸಲಾಗಿದೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಮನೆ ಮನೆಗಳಲ್ಲಿ ತ್ಯಾಜ್ಯವಸ್ತುಗಳನ್ನು ಹಸಿಕಸ ಮತ್ತು ಒಣಕಸಗಳಾಗಿ ಬೇರ್ಪಡಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ, ಬೀದಿ ನಾಟಕ, ಕ್ಯಾಂಪ್ ಮೂಲಕ ಬಕೆಟ್ ವಿತರಣೆ, ಜಾಥಾಗಳು ನಡೆದಿದೆ. ಪುರಸಭಾ ವ್ಯಾಪ್ತಿಯಾದ್ಯಂತ ಘನತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಈಗಾಗಲೇ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪ್ರತಿನಿತ್ಯ ರಸ್ತೆಯ ಮೇಲೆ ಬಿದ್ದಿರುವ ಕಸವನ್ನು ಕೂಡಾ ಗುಡಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವರರ ವಿರುದ್ದ ದಂಡನೆ ವಿಧಿಸುವುದಾಗಿ ಸೂಚಿಸಲಾಗಿತ್ತು.