ಮೊದಲು ಈ ಲಿಂಕ್ ಗಳನ್ನು ಕ್ಲಿಕ್ ಮಾಡಿರಿ. ಬಿ.ಸಿ.ರೋಡ್ ಹೇಗಿದೆ ಎಂಬ ಚಿತ್ರಣ ನಿಮಗೆ ಸಿಗುತ್ತದೆ. ಇದು ಈ ಹಿಂದೆ www.bantwalnews.com ನಲ್ಲಿ ಪ್ರಕಟಗೊಂಡ ವರದಿಗಳು. ಆದರೆ ಸಮಸ್ಯೆ ಇನ್ನೂ ತಾಜಾ ಇದೆ ಎಂಬುದೇ ದುರಂತ. ಅವುಗಳಾದ ಮೇಲೆ ಈಗಿನ ವಿವರ.
ವರದಿ 1:
ವರದಿ – 2
ವರದಿ – 3
ಇದು 2016ರ ಡಿಸೆಂಬರ್ ನಲ್ಲಿ ಪ್ರಕಟಗೊಂಡ ವರದಿ !!!
ನವೆಂಬರ್ 10, 2016ರಲ್ಲಿ ಆರಂಭಗೊಂಡ ದಿನದಿಂದಲೂ ಬಂಟ್ವಾಳ ನ್ಯೂಸ್ ಸಾಂದರ್ಭಿಕವಾಗಿ ಬಿ.ಸಿ.ರೋಡಿನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದೆ. ರಾಜಕೀಯ ಹೊಂದಾಣಿಕೆಯ ಕೊರತೆ, ಸ್ಟೇಟ್ ಮೆಂಟ್ ನೀಡಿ ಫಾಲೋಅಪ್ ಮಾಡದ ರಾಜಕಾರಣಿಗಳು, ಇವನ್ನೆಲ್ಲ ನೋಡಿ ಬೇಸತ್ತು ನಿರಾಸಕ್ತಿಯನ್ನು ಹೊಂದಿರುವ ನಾಗರಿಕರು.. ಹೀಗೆ ಬಿ.ಸಿ.ರೋಡ್ ಅಭಿವೃದ್ಧಿಯೇ ಕನಸು ಎಂಬ ಮಾತು ಜನಸಾಮಾನ್ಯರ ಬಾಯಿಯಿಂದ ಕೇಳಿಬರಲಾರಂಭಿಸಿದವು. ಆದರೆ ನಗರ ಸುಂದರೀಕರಣದ ಮಾತು ಆಗಾಗ್ಗೆ ಜನಪ್ರತಿನಿಧಿಗಳ ಭಾಷಣದಲ್ಲಿ ಕೇಳಿಬರುವಾಗ ಮತ್ತೊಮ್ಮೆ ಆಸೆ ಚಿಗುರುತ್ತದೆ. ಈಗ ಕೆಲ ದಿನಗಳಿಂದ ಬಿ.ಸಿ.ರೋಡ್ ಬ್ಯೂಟಿಫಿಕೇಶನ್ ಬಗ್ಗೆ ಮಾತು ಕೇಳಿಬರುತ್ತಿದೆ. 2016ರಲ್ಲಿ ಪುರಸಭೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಮೀಟಿಂಗ್ ನಲ್ಲೂ ಇದೇ ರೀತಿಯ ಬ್ಯೂಟಿಫಿಕೇಶನ್ ಬಗ್ಗೆ ಪ್ರಸ್ತಾಪವಾಗಿತ್ತು. ಈಗ ಅಕ್ಟೋಬರ್ 1ರಂದು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆದ ಮೀಟಿಂಗ್ ನಲ್ಲಿಯೂ ಈ ವಿಷಯ ಮರುಪ್ರಸ್ತಾಪವಾಗಿದೆ. ಅದಲ್ಲದೆ, ಅಕ್ಟೋಬರ್ 2ರಂದು ನಡೆದ ಸ್ವಚ್ಛತಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲೂ ಶಾಸಕರು ಪೊಳಲಿ ದ್ವಾರದಿಂದ ನಾರಾಯಣಗುರು ವೃತ್ತದವರೆಗೆ ನಗರ ಸುಂದರಗೊಳಿಸುವ ವಿಚಾರವನ್ನು ಹೇಳಿದ್ದಾರೆ. ಇನ್ನು ಫಾಲೋಅಪ್ ಸರದಿ.
ಬಿ.ಸಿ.ರೋಡಿನ ಫ್ಲೈಓವರ್ ಅನ್ನು ಕೆಡಹಿ, ರಸ್ತೆಯನ್ನು ಅಷ್ಟಪಥ ಮಾಡಲಾಗುತ್ತದೆ ಎಂಬ ಮಾತುಗಳು ಆಗಾಗ್ಗೆ ಕೇಳಿಬರುತ್ತಿದ್ದರೂ ಇದಕ್ಕೆ ಇಲಾಖೆಯಿಂದಾಗಲೀ, ಜನಪ್ರತಿನಿಧಿಗಳಿಂದಾಗಲೀ ನಿರ್ದಿಷ್ಟವಾಗಿ ಯಾವಾಗ ನಡೆಯುತ್ತದೆ ಎಂಬ ಖಚಿತ ಉತ್ತರ ದೊರಕುವುದಿಲ್ಲ. ಮುಂದೆ ಹೀಗಾಗಬಹುದು ಎಂಬ ಕಲ್ಪನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಮೂಲಕ ಧನಾತ್ಮಕ ಆಲೋಚನೆ ಕೈಗೊಳ್ಳುವಂತೆ ವಾತಾವರಣವನ್ನು ನಿರ್ಮಿಸಲಾಗಿದೆ. ಆದರೆ ಈಗಂತೂ ಬಿ.ಸಿ.ರೋಡ್ ಯಾವ ಕೋನದಲ್ಲೂ ಮನುಷ್ಯ ಬಳಕೆಗೆ ಯೋಗ್ಯವಾಗಿಲ್ಲ. ಅಡ್ಡಾದಿಡ್ಡಿ ಪಾರ್ಕಿಂಗ್, ಅಲ್ಲಲ್ಲಿ ಕಸದ ರಾಶಿ, ಸರಿಯಾದ ಬಸ್ ನಿಲ್ದಾಣ ಇಲ್ಲದೇ ಇರುವುದು, ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ನಡೆಯುವವರಿಗೆ ಕತ್ತಲ ಭಾಗ್ಯ, ಕಂಡಕಂಡಲ್ಲಿ ಅನಧಿಕೃತ ವ್ಯಾಪಾರ, ಬೋರ್ಡ್, ಫ್ಲೆಕ್ಸ್ ಗಳು, ಆಗಾಗ್ಗೆ ಪೈಪು ಒಡೆದು ಸ್ಟೇಟ್ ಬ್ಯಾಂಕ್ ಎದುರು ನೀರು ಚೆಲ್ಲುವುದು ಹೀಗೆ ಆಧ್ವಾನಗಳ ಸರಮಾಲೆಯನ್ನೇ ಪ್ರತಿ ದಿನ ನೋಡುವಂತೆ ಬಿ.ಸಿ.ರೋಡ್ ಇದೆ.
ಇವೆಲ್ಲದಕ್ಕೂ ಫುಲ್ ಸ್ಟಾಪ್ ಸಿಗಬಹುದೇ? ಕಾಲವೇ ಉತ್ತರಿಸಬೇಕು. ಒಳ್ಳೆಯದಾಗಲಿ ಎಂಬ ಆಶಯ ನಮ್ಮದು. ಈ ಕುರಿತು ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ಹಾಕಬಹುದು.