ಬಂಟ್ವಾಳ

ಶಾಸಕ ರಾಜೇಶ್ ನಾಯ್ಕ್ ಆಶಯದಂತೆ ಬಂಟ್ವಾಳ ಮಾದರಿ ನಗರ: ಸಂಸದ ನಳಿನ್ ಕುಮಾರ್ ಕಟೀಲ್

ಬಿ.ಸಿ.ರೋಡ್, ಬಂಟ್ವಾಳ ಸೇರಿದಂತೆ ಇಡೀ ಬಂಟ್ವಾಳವನ್ನು ರಾಜ್ಯದ ಮಾದರಿ ನಗರವನ್ನಾಗಿ ಪರಿವರ್ತನೆಗೊಳಿಸಬೇಕು ಎಂಬ ಶಾಸಕ ರಾಜೇಶ್ ನಾಯ್ಕ್ ಆಶಯದಂತೆ ಪೊಳಲಿ ದ್ವಾರದಿಂದ ನಾರಾಯಣಗುರು ವೃತ್ತದವರೆಗೆ ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಕೆಲವೇ ತಿಂಗಳಲ್ಲಿ ರೂಪಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಜಾಹೀರಾತು

ಬಂಟ್ವಾಳ ಶಾಸಕರ ಕಚೇರಿಯಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯರ ಸಮಕ್ಷಮ ಸಭೆಯೊಂದನ್ನು ನಡೆಸಿ ಯೋಜನಾಪಟ್ಟಿ ತಯಾರಿಯ ಕುರಿತು ಚರ್ಚೆ ನಡೆಸಿದ ಸಂಸದರು, ಕುಳೂರು, ಸುರತ್ಕಲ್ ಮೇಲ್ಸೇತುವೆ ಕೆಳಭಾಗದಲ್ಲಿ ಆಟೊ, ಟೆಂಪೊ, ಪೊಲೀಸ್ ಸಹಿತ ನಾಗರಿಕರ ಅವಶ್ಯಕತೆಗೆ ಅನುಸಾರವಾಗಿ ಪಾರ್ಕಿಂಗ್, ತಂಗುದಾಣ ಹಾಗೂ ಸೌಂದರ್ಯವೃದ್ಧಿಗೆ ಗಾರ್ಡನ್ ಮಾಡುವ ಮೂಲಕ ಕಸ ಕೊಂಪೆಯಂತಿದ್ದ ಫ್ಲೈಓವರ್ ಅಡಿ ಸುಂದರಗೊಂಡಿದೆ. ಅದೇ ರೀತಿ ಇಲ್ಲಿನ ಅವಶ್ಯಕತೆಗಳಿಗೆ ಪೂರಕವಾಗಿ ಬಿ.ಸಿ.ರೋಡ್ ಫ್ಲೈಓವರ್ ಅಡಿಯಲ್ಲಿ ಜನರಿಗೆ ಉಪಯೋಗವಾಗುವಂತೆ ಇಂಟರ್ ಲಾಕ್ ಅಳವಡಿಕೆ, ಸುಣ್ಣ, ಬಣ್ಣ, ಪಾರ್ಕಿಂಗ್, ಪೊಲೀಸರಿಗೆ ವಿಶ್ರಾಂತಿ ಸ್ಥಳ, ಕುಡಿಯುವ ನೀರು, ಶೌಚಾಲಯ, ಆಟೊ, ಟೆಂಪೊ ಪಾರ್ಕಿಂಗ್, ದೀಪದ ವ್ಯವಸ್ಥೆ ಹೀಗೆ ಬದಲಾವಣೆಗಳೊಂದಿಗೆ ಸುಂದರ ಸ್ವಚ್ಛ ಪ್ರದೇಶವನ್ನಾಗಿ ಪರಿವರ್ತಿಸಬೇಕಾಗಿದೆ. ಇದಕ್ಕೆ ಸಾರ್ವಜನಿಕರ, ಖಾಸಗಿ ಸಹಭಾಗಿತ್ವವನ್ನು ಪಡೆದುಕೊಂಡು ಕೆಲಸ ನಿರ್ವಹಿಸಬೇಕು ಎಂದರು. ಸರ್ವೀಸ್ ರಸ್ತೆಯೂ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಈ ಕೆಲಸದ ವೇಳೆ ಅದನ್ನೂ ಅಪಾಯಕಾರಿಯಲ್ಲದ ಸ್ಥಿತಿಗೆ ತಂದಿಡಬೇಕು. ತೊಂದರೆಗೊಳಗಾಗದ ಸ್ಥಿತಿಯಲ್ಲಿ ಮೆಸ್ಕಾಂನ ತಂತಿಗಳು ಇರಬೇಕು. ಸಮಸ್ಯೆಗಳು ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್ ಅವರಿಗೆ ಸೂಚಿಸಿದರು.

ಈ ಸಂದರ್ಭ ವಿವರಗಳನ್ನು ನೀಡಿದ ಉಮೇಶ್ ಭಟ್, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತಿರುಗುವ ಪ್ರದೇಶ, ಅಲ್ಲಿ ಸರ್ಕಲ್ ನಿರ್ಮಾಣದ ನಕ್ಷೆಯನ್ನು ಒದಗಿಸಿದರು.

ಶಾಸಕ ರಾಜೇಶ್  ನಾಯ್ಕ್ ಮಾತನಾಡಿ, ಸಿಸಿ ಕ್ಯಾಮರಾ ಅಳವಡಿಕೆಯನ್ನು ಆಯಕಟ್ಟಿನ ಜಾಗದಲ್ಲಿ ಮಾಡಲಾಗುವುದು, ಇದಕ್ಕಾಗಿ ಕೂಡಲೇ ಅಂದಾಜುಪಟ್ಟಿಯನ್ನು ಒದಗಿಸುವಂತೆ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಟ್ರಾಫಿಕ್ ಅಧವಾ ಇತರೆ ಸಮಸ್ಯೆಗಳು, ಪಾರ್ಕಿಂಗ್ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಖಾಸಗಿಯವರಿಂದ ಸರ್ವೇ ನಡೆಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸಮಸ್ಯೆಗಳನ್ನು ವಿವರಿಸಿದ ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ಗೆ ಜಾಗವಿದ್ದು, ರಂಗಮಂದಿರದಿಂದ ಬಿಇಒ ಕಚೇರಿವರೆಗಿನ ಕೈಕುಂಜೆ ರಸ್ತೆಯನ್ನು ಹಿಂದಿನ ನಕ್ಷೆಯ ಪ್ರಕಾರ ಬದಲಾಯಿಸಿದರೆ, ಪಾರ್ಕಿಂಗ್ ಸಮಸ್ಯೆಯೂ ಪರಿಹಾರವಾಗುತ್ತದೆ, ನಗರದ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.
ಬಂಟ್ವಾಳ ನಗರ ಪೊಲಿಸ್ ಠಾಣಾಧಿಕಾರಿ ಚಂದ್ರಶೇಖರ್, ಟ್ರಾಫಿಕ್ ಎಸೈ ಮಂಜುಳಾ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ, ಅಧಿಕಾರಿ ರಮೇಶ್ ಶೆಟ್ಟಿ, ಮೆಸ್ಕಾಂ ಎಇಇ ನಾರಾಯಣ ಭಟ್, ಪುರಸಭೆ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ರಾಮದಾಸ ಬಂಟ್ವಾಳ ಮತ್ತಿತರರು ಸಭೆಯಲ್ಲಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.