ಬಂಟ್ವಾಳ

ಯಾವುದೇ ಸರಕಾರಿ ಕಾರ್ಯಕ್ರಮಗಳಲ್ಲಿ ಪಕ್ಷ ಚಿಹ್ನೆ ಬ್ಯಾನರ್ ಬಳಕೆ ಇಲ್ಲ

  • ಕಾವೇರಿದ ಚರ್ಚೆ ಬಳಿಕ ಬಂಟ್ವಾಳ ತಾಲೂಕು ಪಂಚಾಯತ್ ಸಭೆಯಲ್ಲಿ ಅಧ್ಯಕ್ಷರ ಸೂಚನೆ

ಯಾವುದೇ ಸರಕಾರಿ ಕಾರ್ಯಕ್ರಮದಲ್ಲಿ ಯಾವುದೇ ಪಕ್ಷದ ಚಿಹ್ನೆಯ ಬ್ಯಾನರ್ ಬಳಸುವಂತಿಲ್ಲ ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸೂಚಿಸಿದ್ದಾರೆ.

ಬಿ.ಸಿ.ರೋಡಿನಲ್ಲಿರುವ ಎಸ್ ಜಿ ಎಸ್ ಆರ್ ವೈ ಸಭಾಂಗಣದಲ್ಲಿ ಸುದೀರ್ಘ ಮೂರು ತಿಂಗಳ ಬಳಿಕ ಬುಧವಾರ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ‌ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಉಪಾಧ್ಯಕ್ಷ ಅಬ್ಬಾಸ್ ಆಲಿ,ಸ್ಥಾಯಿಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ,ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು.ಸದಸ್ಯರಾದ  ಆದಂಕುಂಞ,ಹೈದರ್ ಕೈರಂಗಳ,ಸಂಜೀವ ಪೂಜಾರಿ,ನಸೀಮಾ ಬೇಗಂ,ಗಣೇಶ್ ಸುವರ್ಣ, ಮಹಾಬಲ ಆಳ್ವ,ನವೀನ್ ಪೂಜಾರಿ,ಮಂಜುಳ, ಗೀತಾ ಚಂದ್ರಶೇಖರ,ಲಕ್ಷ್ಮಿಗೋಪಾಲಾಚಾರ್ಯ, ಎಂ.ಆರ್. ಹೈದರ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. 

ಸದಸ್ಯೆ ಮಲ್ಲಿಕಾ ಶೆಟ್ಟಿ ಅವರು ವಿಷಯ ಪ್ರಸ್ತಾವಿಸಿ ಇತ್ತೀಚೆಗೆ ಅಮ್ಟಾಡಿಯಲ್ಲಿ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಪಕ್ಷವೊಂದರ ಚಿಹ್ನೆಯ ಬ್ಯಾನರ್ ಹಾಕಲಾಗಿದ್ದು,ಇದಕ್ಕೆ ಅವಕಾಶವಿದೆಯಾ ಎಂದು ಪ್ರಶ್ನಿಸಿದರು. ಇದು ಸುದೀರ್ಘ ಮಾತಿನ ಚಕಮಕಿಗಳಿಗೆ ಕಾರಣವಾಯಿತು. ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ತಾಪಂ ಸದಸ್ಯರಾದ ರಮೇಶ್ ಕುಡ್ಮೇರು, ಯಶವಂತ ಪೊಳಲಿ ಸಹಿತ ಹಲವರು ಈ ಸಂದರ್ಭ ಚರ್ಚೆಯಲ್ಲಿ ಪಾಲ್ಗೊಂಡರು. ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಮಾತನಾಡಿ, ಸರಕಾರಿ ಕಾರ್ಯಕ್ರಮದಲ್ಲಿ ಯಾವುದೇ ಪಕ್ಷದ ಚಿಹ್ನೆಯ ಬ್ಯಾನರ್ ಹಾಕದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿ ರೂಲಿಂಗ್ ಹೊರಡಿಸಿದರು.

ಅಡಕೆ ಕೊಳೆರೋಗಕ್ಕೆ ಸಂಬಂಧಿಸಿ  ತಾಪಂ ಸದಸ್ಯ ಸಂಜೀವ ಪೂಜಾರಿ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್, ಜಂಟಿ ಸರ್ವೇ ಕಾರ್ಯ ನಡೆಯುತ್ತಿದೆ.ಇದೀಗ ಅರ್ಜಿ ಸ್ವೀಕೃತಿ ಅವಧಿ ಮುಗಿದಿದ್ದು,  ಸುಮಾರು13 ಸಾವಿರ ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ ಎಂದರು.

ಐದು ಗ್ರಾಮಕ್ಕೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಅನುಷ್ಠಾನಗೊಂಡಿರುವ ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಇಒ ರಾಜಣ್ಣ ಅವರೇ ಈ ಬಗ್ಗೆ ವಿಷಯ ಮಂಡಿಸಿ ದಿನ ಬೆಳೆಗಾದರೆ ಗ್ರಾಮಸ್ಥರಿಂದ ನೀರಿಲ್ಲ ಎಂಬ ಪೋನ್ ಕರೆ ಬರುತ್ತಿದೆ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರಾದ ನರೇಂದ್ರಬಾಬು ಅವರ ಗಮನಕ್ಕೆ ತಂದರು. ನಿಮಗೆ ಮಾತ್ರವಲ್ಲ ನಮಗೂ ಕರೆಗಳು ಬರುತ್ತಿದೆ ಎಂದು ಜಿಪಂ ಸದಸ್ಯ ಎಮ್ ಎಸ್ ಮಹಮ್ಮದ್ ,ಸದಸ್ಯ ಉಸ್ಮಾನ್ ಕರೋಪಾಡಿ ಹೇಳಿದರು.ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂಬ ದೂರಿಗೆ ಸ್ಥಳೀಯವಾಗಿರುವ ಸಮಸ್ಯೆಯನ್ನು ಮೆಸ್ಕಾಂ ಹಾಗೂ ಜಿಪಂ ಸ.ಕಾ.ಇ.ತೆರೆದಿಟ್ಟರು.ಈ ಎರಡು ಇಲಾಖೆಯ ಸಮನ್ವತೆ ಕೊರತೆ ಮಾತ್ರವಲ್ಲ ಸಜೀಪ ಗ್ರಾಮದಲ್ಲಿ ಇದರ ಮೂಲ ಸಮಸ್ಯೆ ಇದ್ದು, ಅದನ್ನು ಪರಿಹರಿಸದ್ದಿದ್ದರೆ, ಸಭೆ ವ್ಯರ್ಥ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಹೇಳಿದರು. ಬಳಿಕ ಸಭೆ ಮುಗಿಯುತ್ತಿದ್ದಂತೆ ಸಜೀಪ ಗ್ರಾಮಕ್ಕೆ ಅಧಿಕಾರಿಗಳು,ಜನಪ್ರತಿನಿಧಿಗಳ ತಂಡ ಅಧ್ಯಕ್ಷರ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯ ಪಂಚಾಯತ್ ನೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ನಿರ್ಧರಿಸಲಾಯಿತು.

ಮಂಚಿ -ಕುಕ್ಕಾಜೆ ಕಾಂಕ್ರೆಟ್  ರಸ್ತೆಯನ್ನು  ಯಾರೋ ಒಡೆದುಹಾಕಿದ್ದು,ಈ ಬಗ್ಗೆ ತನಿಖೆನೆಡಸುವಂತೆ ಇರಾ ಪಂಚಾಯತ್ ಅಧ್ಯಕ್ಷ ರಜಾಕ್ ಕುಕ್ಕಾಜೆ ಸಭೆಯ ಗಮನ ಸೆಳೆದು ತನಿಖೆಗೆ ಒತ್ತಾಯಿಸಿದರು. ಇದಕ್ಕೆ‌ಸ್ಪಂದಿಸಿದ ಇಒ ರಾಜಣ್ಣ ಎಇಇ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದರು.

ಯಾವುದೇ ಪೀಸ್ ವರ್ಕ್ ಕೆಲಸ ವನ್ನು ಮಾಡುವಂತಿಲ್ಲ. ಸರಕಾರದ ಆದೇಶವಿದೆ ಎಂದು ಎಇಇ ನರೇಂದ್ರಬಾಬು ಸಭೆಯ ಗಮನ ಸೆಳೆದರು. ಈ ಸಂದರ್ಭ ಆರಂಭಗೊಂಡ ಕಾಮಗಾರಿಗಳ ಗತಿ ಏನು ಎಂದು ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಪ್ರಶ್ನಿಸಿದರು. ಈ ಕುರಿತು ಸರಕಾರದ ಮಟ್ಟದಲ್ಲಿ ಗಮನ ಹರಿಸಬೇಕು ಎಂದು ಅಧ್ಯಕ್ಷರು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಪ್ರತೀ ತಾಲೂಕು ಪಂಚಾಯತ್ ಸಭೆಯಲ್ಲೂ ತಾನು ಪ್ರಸ್ತಾಪಿಸುತ್ತಿರುವ ಕೆದಿಲ ಗ್ರಾಮದ ಸತ್ತಿಕಲ್ಲು ಹಿ.ಪ್ರಾ.ಶಾಲೆಯ ಜಮೀನು ಮಂಜೂರಾತಿ ವಿಚಾರದ ಚರ್ಚೆ ಇದೇ ಸಭೆಯಲ್ಲಿ ಇತ್ಯರ್ಥವಾಗಬೇಕು. ಇಲ್ಲವಾದಲ್ಲಿ ಮುಂದಿನ ಸಭೆಯ ವೇಳೆಗೆ ತನ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆದಿಲ ತಾಪಂ ಸದಸ್ಯ ಆದಂ ಕುಂಞಿ ಅವರು ಎಚ್ಚರಿಕೆ ನೀಡಿದ ಪ್ರಸಂಗವೂ ನಡೆಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ