ಇಂದು ಮಹಾತ್ಮಾ ಗಾಂಧೀಜಿಯವರ ಆದರ್ಶ ಪಾಲನೆ ಅಗತ್ಯವಾಗಿದೆ. ಸತ್ಯ, ಅಹಿಂಸೆಯ ಮೂಲಕ ಅವರು ಗಳಿಸಿಕೊಟ್ಟ ಸ್ವಾತಂತ್ರ್ಯದ ಅರಿವು ಬೇಕಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.
ಮಂಗಳವಾರ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಬಂಟ್ವಾಳದ ಮಿನಿ ವಿಧಾನಸೌಧದಲ್ಲಿ ನಡೆದ ಗಾಂಧೀ ಜಯಂತಿ ಆಚರಣೆಯನ್ನು ಜ್ಯೋತಿ ಬೆಳಗಿಸಿ ಗಾಂಧೀಜಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಅಸ್ಪೃಶ್ಯತೆ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭ ಗಾಂಧಿಜಿಯವರು ಕೈಗೊಂಡ ಮಾರ್ಗ ಅನುಕರಣೀಯ ಎಂದ ತಹಶೀಲ್ದಾರ್, ಗಾಂಧಿಜಿಯ ಅಧ್ಯಯನ ಕುರಿತು ಇಂದಿನ ಪೀಳಿಗೆ ಆಸಕ್ತಿ ವಹಿಸದೇ ಇರುವುದು ವಿಷಾದನೀಯ ಎಂದರು. ಇದೇ ವೇಳೆ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನೂ ಸ್ಮರಿಸಿದ ಅವರು ದೇಶ ಕಂಡ ಅಪ್ರತಿಮ ಪ್ರಧಾನಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಮಾತನಾಡಿ, ಗಾಂಧೀಜಿಯವರ ತತ್ವಾದರ್ಶಗಳನ್ನು ಇಂದು ಮರೆಯುತ್ತಿರುವುದು ವಿಷಾದನೀಯ. ಅವಮಾನಗಳನ್ನು ಸಹಿಸಿ ತನ್ನ ಮಾರ್ಗದಲ್ಲೇ ಹೋರಾಟ ನಡೆಸಿದ ಗಾಂಧೀಜಿಯ ಜೀವನ ಹಾಗೂ ಭಾರತಕ್ಕೆ ಗೌರವ ನೀಡಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನದ ಅಧ್ಯಯನ ನಡೆಸುವುದು ಇಂದು ಅಗತ್ಯ ಎಂದು ಹೇಳಿದರು.
ಪ್ರಭಾರ ಉಪತಹಶೀಲ್ದಾರ್ ಗ್ರೆಟ್ಟಾ ಮಸ್ಕರೇಂಜಸ್, ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವಿಷಯ ನಿರ್ವಾಹಕ ವಿಷುಕುಮಾರ್, ತಾಲುಕು ಕಚೇರಿ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಈ ಸಂದರ್ಭ ಉಪಸ್ಥಿತರಿದ್ದರು.