ಸಂವಿಧಾನ ಅಪಾಯದಲ್ಲಿದ್ದು ಉಳಿಸಲು ಹೋರಾಟ ಅನಿವಾರ್ಯವಾಗಿದೆ ಎಂದು ಬೆಂಗಳೂರಿನ ನಿವೃತ್ತ ಪೊಲೀಸ್ ಉಪಆಯುಕ್ತ ಬಿ.ಕೆ. ಶಿವರಾಂ ಅಭಿಪ್ರಾಯಪಟ್ಟಿದ್ದಾರೆ.
ಬಂಟ್ವಾಳ ಗಾಣದಪಡ್ಪಿನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ರವಿವಾರ ನಡೆದ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಬಂಟ್ವಾಳ ತಾಲೂಕು ಸಮಿತಿ, ಸಂವಿಧಾನ ಆಂದೋಲನ ಸ್ವಾಗತ ಸಮಿತಿ ಬಂಟ್ವಾಳ ವತಿಯಿಂದ “ಸಂವಿಧಾನ ಆಂದೋಲನ ಕಾರ್ಯಕ್ರಮದಲ್ಲಿ “ಜಾತಿ ವ್ಯವಸ್ಥೆ ಅಮಾನವೀಯತೆ ಮತ್ತು ಶ್ರೀ ನಾರಾಯಣ ಗುರುಗಳ ಹೋರಾಟ” ವಿಶೇಷ ಉಪನ್ಯಾಸ ನೀಡಿ, ಮನುವಾದಿಗಳ ಪಾಲಕರು ಸಾರುವ ಹಿಂದೂ ಧರ್ಮ ನಮಗೆ ಬೇಕಾಗಿಲ್ಲ. ಇದು ದೇಶಕ್ಕೆ ಅಪಾಯ. ಸ್ವಾಮಿ ವಿವೇಕಾನಂದರು, ಬ್ರಹ್ಮಶ್ರೀ ನಾರಾಯಣ ಗುರು, ಮಹಾತ್ಮ ಗಾಂಧೀಜಿ ಹಾಗೂ ಕವಿ ಕುವೆಂಪು ಅವರು ಸಾರಿರುವ ಹಿಂದೂ ನಮಗೆ ಬೇಕಾಗಿದೆ ಎಂದು ಹೇಳಿದರು.
ಇಂದಿನ ಯುವ ಜನತೆ ಏಕ ಸಂಸ್ಕೃತಿ ಮತ್ತು ಏಕ ಧರ್ಮದ ಹಿಂದೆ ಹೋಗುತ್ತಿರುವುದರಿಂದ ಭಾರತದ ಸಂವಿಧಾನ ಅಪಾಯದಲ್ಲಿದೆ. ವೈವಿದ್ಯತೆಯಿಂದ ಕೂಡಿರುವ ಹಾಗೂ ಬಹು ಸಂಸ್ಕೃತಿಯನ್ನು ಒಪ್ಪಿ ಸ್ವೀಕರಿಸುವ ಮೂಲಕ ಭಾರತದ ಸಂವಿಧಾನವು ನಿಜಾರ್ಥದಲ್ಲಿ ಅನುಷ್ಠಾನವಾಗುವವರೆಗೂ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ಹಿರಿಯ ಹೋರಾಟಗಾರ ಜಯಾನಂದ ದೇವಾಡಿಗ ಅವರು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನ ಪ್ರಜಾಪ್ರಭುತ್ವದ ಜೀವಾಳವಾಗಿದೆ. ಸಂವಿಧಾನ ಉಳಿದರೆ ಈ ದೇಶ ಉಳಿಯುತ್ತದೆ. ಸಂವಿಧಾನ ಎಲ್ಲ ಜೀವ ರಾಶಿಗಳ ಆತ್ಮ. ಆದ್ದರಿಂದ ನಮ್ಮ ಹಕ್ಕುಗಳಿಗಾಗಿ ಯೋಚಿಸಿ, ವಿವೇಚಿಸಿ ಹಾಗೂ ನಿರ್ಧರಿಸುವ ಮೂಲಕ ಉಳಿಸುಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ವಲಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಮಾನವ ಬಂಧುತ್ವ ವೇದಿಕೆಯು ಕಳೆದ ೫ ವರ್ಷಗಳಿಂದ ಸಮಾಜವನ್ನು ಕಟ್ಟುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮಾನವೀಯತೆಯೇ ನಮ್ಮ ಧರ್ಮ, ಸಂವಿಧಾನವೇ ನಮ್ಮ ಗ್ರಂಥ ಎಂದು ನುಡಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಬಹು ಸಂಸ್ಕೃತಿಗಾಗಿ ಸಂವಿಧಾನ ಜಾರಿಗೊಂಡಿದೆಯೇ ವಿನಃ, ಆರೆಸ್ಸೆಸ್ಸ್‌ನ ಮನು ಸಂಸ್ಕೃತಿಯನ್ನು ಅನುಷ್ಠಾನಗೊಳಿಸುವುದಕ್ಕಲ್ಲ ಎಂದು ಹೇಳಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಪ್ರಕಾಶ್ ಅವರು “ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸ್ಥಿತಿ” ವಿಷಯದ ಕುರಿತು ಮಾತನಾಡಿ, ಖಾಸಗೀಕರಣದ ವಿರುದ್ಧ ಜಾಗೃತರಾಗಲು ಕರೆ ನಈಡಿದರು.
ಮಾನವ ಬಂಧುತ್ವ ವೇದಿಕೆ ವಲಯ ಸಂಚಾಲಕ ಹೈಕೋರ್ಟ್ ವಕೀಲ ಅನಂತ ನಾಯಕ್ ಅವರು, “ಭಾರತ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ” ಕುರಿತು ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯ ಕೊಡಗು ಜಿಲ್ಲಾ ಮುಖಂಡ ಕುಂಞಿ ಅಬ್ದುಲ್ಲ ಹಾಗೂ ಲೇಖಕಿ ಡಾ.ಲೀಲಾ ಸಂಪಿಗೆ ಅವರು ವಿಶೇಷ ಉಪನ್ಯಾಸಕ್ಕೆ ಪ್ರತಿಕ್ರಿಯೆ ನೀಡಿದರು.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ನಿರ್ಮಾಪಕ ಡಾ.ರಾಜಶೇಖರ ಕೋಟ್ಯಾನ್, ಲೇಖಕಿ ಬಿ.ಎಂ.ರೋಹಿಣಿ, ಬೆಳಗಾವಿಯ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಭಾಗವಹಿಸಿದ್ದರು. ವಲಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಬಂಟ್ವಾಳ ತಾಲೂಕು ಸಂಚಾಲಕ ಎ.ಗೋಪಾಲ ಅಂಚನ್, ದ.ಕ.ಜಿಲ್ಲೆ ಸಂಚಾಲಕ ನಾರಾಯಣ ಕಿಲ್ಲಂಗೋಡಿ, ಸಹಸಂಚಾಲಕ ಚೆನ್ನಕೇಶವ, ಸಂವಿಧಾನ ಆಂದೋಲನಚಸಮಿತಿ ಗೌರವಾಧ್ಯಕ್ಷ ರಾಜಾ ಚಂಡ್ತಿಮಾರ್, ಸಂಚಾಲಕ ಪ್ರಭಾಕರ ದೈವಗುಡ್ಡೆ, ಕಾರ್ಯದರ್ಶಿ ಮಹಮ್ಮದ್ ತೌಸೀಫ್ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಎಸ್. ಸ್ವಾಗತಿಸಿದರು. ರಾಜೀವ ಕಕ್ಯಪದವು, ಹಮೀದ್ ಗೋಳ್ತಮಜಲು ನಿರೂಪಿಸಿದರು.