ಆಗ್ನೇಯ ಏಷ್ಯಾದ ದ್ವೀಪರಾಷ್ಟ್ರ ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿಗೆ ಬಲಿಯಾದವರ ಸಂಖ್ಯೆ ಸಾವಿರದ ಸನಿಹಕ್ಕೆ ತಲುಪಿದೆ.
ಅಧಿಕೃತವಾಗಿ 832 ಮಂದಿ ಮೃತರ ಲೆಕ್ಕ ಸಿಕ್ಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ ಎನ್ನಲಾಗಿದೆ. 540 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
1.5 ಮೀಟರ್ ಎತ್ತರದ ಬೃಹತ್ ಅಲೆಗೆ ಸಿಲುಕಿದ 3.5 ಲಕ್ಷ ಜನಸಂಖ್ಯೆಯುಳ್ಳ ಕರಾವಳಿ ನಗರ ಪಲುವಿನಲ್ಲೇ ಹೆಚ್ಚಿನ ವಿಪತ್ತು ಸಂಭವಿಸಿದೆ. ಸುನಾಮಿ ಸಂಭವಿಸಿ ಎರಡು ದಿನಗಳಾದ ಬಳಿಕ ಸದ್ಯಕ್ಕೆ ಪಲು ನಗರದ ವರದಿಗಳು ಮಾತ್ರ ದೊರಕಿದ್ದು, ಇತರೆ ಭಾಗಗಳಲ್ಲಿ ಉಂಟಾದ ಅನಾಹುತದ ವಿವರ ಇನ್ನಷ್ಟೇ ಲಭಿಸಬೇಕಿದೆ.
ಭೂಕಂಪದ ಕೇಂದ್ರಕ್ಕೆ ಸನಿಹವಿದ್ದ, 3 ಲಕ್ಷ ಜನರು ವಾಸವಿರುವ ಡೊಂಗಾಲಾ ಜಿಲ್ಲೆಯ ಮಾಹಿತಿ ಏನೇನೂ ಬಂದಿಲ್ಲ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳೇ ಹೇಳಿದ್ದಾರೆ.
ಪಲು ನಗರದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಂಡೋನೇಷ್ಯಾದ ಮಿಲಿಟರಿ ಧಾವಿಸಿದೆ. ಅವಶೇಷಗಳ ಅಡಿಯಲ್ಲಿ ಬದುಕುಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ರೋ-ರೋ ಎಂಬ ಹೊಟೇಲ್ ಒಂದರಲ್ಲೇ ಕನಿಷ್ಠ 150 ಮಂದಿ ಸಿಲುಕಿರುವ ಶಂಕೆಯಿದೆ. ಒಬ್ಬ ಮಹಿಳೆಯನ್ನು ಅಲ್ಲಿಂದ ಜೀವಂತವಾಗಿ ಹೊರಕ್ಕೆ ಕರೆತರಲಾಗಿದೆ. ಒಳಗಿನಿಂದ ಇನ್ನೂ ಆರ್ತನಾದ ಕೇಳುತ್ತಿದೆ ಎಂದು ಕಾರ್ಯಾಚರಣಾ ಸಿಬ್ಬಂದಿ ಹೇಳಿದ್ದಾರೆ. ಬೀಚ್ ಉತ್ಸವಕ್ಕಾಗಿ ಸಾವಿರಾರು ಮಂದಿ ಸಿದ್ಧತೆ ನಡೆಸುತ್ತಿರುವ ವೇಳೆಯಲ್ಲೇ ಶುಕ್ರವಾರ 7.5 ತೀವ್ರತೆಯ ಭೂಕಂಪನ ಉಂಟಾಗಿ ಸಮುದ್ರದಲ್ಲಿ ಸುನಾಮಿ ಎದ್ದಿತ್ತು.