ಮಾಹಿತಿ

ಸುರಕ್ಷಿತ ರಕ್ತದಾನಕ್ಕಿರಲಿ ನಮ್ಮ ಆದ್ಯತೆ

ಡಾ. ಮುರಳೀ ಮೋಹನ ಚೂಂತಾರು

ದೇಶದಾದ್ಯಂತ ಅಕ್ಟೊಂಬರ್ 1 ರಂದು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನ ಎಂದು ಆಚರಿಸಲಾಗುತ್ತದೆ. ಸುರಕ್ಷಿತ ರಕ್ತದಾನದ ಬಗ್ಗೆ ಆದ್ಯತೆ ಮತ್ತು ಅಗತ್ಯತೆಯ ಬಗ್ಗೆ ಅರಿವು ಮೂಡಿಸಲು ಈ ಆಚರಣೆಯನ್ನು ಭಾರತೀಯ ರಕ್ತಪೂರಣ ಸಂಸ್ಥೆ 1975 ಅಕ್ಟೋಬರ್ 1 ರಿಂದ  ಈ ಆಚರಣೆಯನ್ನು ಜಾರಿಗೆ ತಂದಿತು.  ಈ ಹಿನ್ನೆಲೆಯಲ್ಲಿ ಲೇಖನ.

ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸುವ ಸಲುವಾಗಿ ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದಾನ ಮಾಡುವುದಕ್ಕೆ ರಕ್ತದಾನ ಎನ್ನುತ್ತಾರೆ. ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ರಕ್ತಕ್ಕೆ ಪರ್ಯಾಯವಾದ ವಸ್ತು ಇನ್ನೊಂದಿಲ್ಲ. ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಲಾಗುತ್ತದೆ. ರಕ್ತ ನಮ್ಮ ದೇಹದ ಅತೀ ಅಮೂಲ್ಯವಾದ ದ್ರವ್ಯ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸುಮಾರು ೫ರಿಂದ ೬ಲೀಟರ್‌ಗಳಷ್ಟು ರಕ್ತವಿರುತ್ತದೆ. ರಕ್ತ ನಮ್ಮ ದೇಹದ ತೂಕದ 7 ಪ್ರತಿಶತ ತೂಗುತ್ತದೆ. ರಕ್ತದಲ್ಲಿ ಬಿಳಿರಕ್ತಕಣ, ಕೆಂಪುರಕ್ತಕಣ, ಪ್ಲೇಟ್‌ಲೆಟ್ ಮತ್ತು ಪ್ಲಾಸ್ಮ ಮುಂತಾದ ಬೇರೆ ಬೇರೆ ರೀತಿಯ ಅಂಶಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿರುತ್ತದೆ. ಒಟ್ಟು ರಕ್ತದಾನ ಮಾಡುವಾಗ 350 ರಿಂದ 450 ಮಿ.ಲೀ. ರಕ್ತವನ್ನು ತೆಗೆಯಲಾಗುತ್ತದೆ.

ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ಅಗತ್ಯದ ಮತ್ತು ತುರ್ತು ಚಿಕಿತ್ಸೆಯ ಸಮಯದಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿಸುತ್ತಾರೆ. ಯಾಕೆಂದರೆ ಅನಿರೀಕ್ಷಿತ ಅಪಘಾತಗಳು, ತುರ್ತು ಶಸ್ತ್ರ ಚಿಕಿತ್ಸೆಗಳ ಸಮಯದಲ್ಲಿ, ರಕ್ತದ ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸಮಯದಲ್ಲಿ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ. ಇದಲ್ಲದೆ ಥಾಲಸೀಮೀಯಾ (ಅನಿವಂಶಿಕ ರೋಗ) ಮತ್ತು ಹಿಮೊಫಿಲಿಯಾ (ಕುಸುಮ ರೋಗ) ಇರುವ ವ್ಯಕ್ತಿಗಳಿಗೆ ಜೀವನ ಪರ್ಯಂತ ರಕ್ತದಾನಿಗಳಿಂದ ರಕ್ತದ ಅವಶ್ಯಕತೆ ಇರುತ್ತದೆ.

ಪ್ರತೀ ವರ್ಷ ನಮ್ಮ ದೇಶದಲ್ಲಿ ಸುಮಾರು 4ರಿಂದ 4.5 ಕೋಟಿ ಯೂನಿಟ್‌ಗಳಷ್ಟು ರಕ್ತದ ಅವಶ್ಯಕತೆ ಇದೆ. ಆದರೆ ಬಹಳ ನೋವಿನ ಸಂಗತಿಯೆಂದರೆ ಪ್ರತೀ ವರ್ಷ ಸ್ವಯಂಪ್ರೇರಿತ ರಕ್ತದಾನಿಗಳಿಂದ ಶೇಖರಿಸಲ್ಪಡುವ ರಕ್ತದ ಯೂನಿಟ್ ಕೇವಲ 50ರಿಂದ 60 ಲಕ್ಷ ಯೂನಿಟ್‌ಗಳು ಮಾತ್ರ ಅಂದರೆ ಬೇಡಿಕೆಯ ಶೇಕಡಾ 50ರಿಂದ 60ರಷ್ಟು ಮಾತ್ರ ರಕ್ತದ ಪೂರೈಕೆಯಾಗುತ್ತಿದೆ. ನಮ್ಮ ಕರ್ನಾಟಕ ರಾಜ್ಯ ಪ್ರತಿದಿನ 900ರಿಂದ 1200 ಯೂನಿಟ್‌ಗಳಷ್ಟು ರಕ್ತದ ಅವಶ್ಯಕತೆ ಇದೆ.

ದಿನದ ಪ್ರತಿಕ್ಷಣವೂ ದೇಶದ ಯಾವುದಾದರೂ ಭಾಗದಲ್ಲಿ ಯಾರೊಬ್ಬರಿಗಾದರೂ ರಕ್ತದ ಅವಶ್ಯಕತೆ  ಇರುತ್ತದೆ. ಹಾಗಾಗಿ ಪ್ರತಿ ದಿನ ನಮ್ಮ ದೇಶದಲ್ಲಿ ಕನಿಷ್ಠ ಪಕ್ಷ ೩೮,೦೦೦ ಯೂನಿಟ್‌ಗಳ  ಪೂರ್ತಿ ರಕ್ತದ  ಅವಶ್ಯಕತೆ ಇದೆ. ರಕ್ತದಾನಿಗಳಿಂದ ಪಡೆದ ರಕ್ತವನ್ನು ಅವಶ್ಯಕತೆಗಳಿಗೆನುಗುಣವಾಗಿ ಪೂರ್ತಿರಕ್ತ (ಹೋಲ್ ಬ್ಲೆಡ್),  ಕೆಂಪು ರಕ್ತಕಣ, ಪ್ಲೇಟ್‌ಲೆಟ್, ಪ್ಲಾಸ್ಮ ಮತ್ತು ಕ್ರಯೋಪ್ರೇಸಿಪಿಟೇಟ್ ಎಂಬುದಾಗಿ ವಿಂಗಡಿಸಲಾಗುತ್ತದೆ. ಒಂದು ಯೂನಿಟ್ ಪೂರ್ತಿ ರಕ್ತದ ಚೀಲದಿಂದ ಮೂರು ಬೇರೆ ಬೇರೆ ರೀತಿಯಲ್ಲಿ ಕೆಂಪು ರಕ್ತಕಣ, ಪ್ಲೇಟ್‌ಲೆಟ್ ಮತ್ತು ಪ್ಲಾಸ್ಮ ಎಂಬುದಾಗಿ ವಿಂಗಡಿಸುವುದರಿಂದ, ಒಂದು ರಕ್ತದಾನದಿಂದ ಮೂರು ರೋಗಿಗಳಿಗೆ ಜೀವದಾನ ಮಾಡುವ ಅವಕಾಶ ಒದಗಿ ಬರುತ್ತದೆ. ರಕ್ತದಾನ ಎಂಬುವುದು ಬಹಳ ಪವಿತ್ರವಾದ ಕಾರ್ಯ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಲೇಬೇಕು. ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯ ಎಂದು ಭಾವಿಸಿ, ಆಗಾಗ ರಕ್ತದಾನ ಅಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸುವುದು ಸಾಧ್ಯವಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ಜನರ ಜೀವ ಉಳಿಸಬೇಕಾದರೆ ರಕ್ತ ಪೂರೈಕೆ ಬೇಕೇ ಬೇಕು. ಇಷ್ಟು ಬೇಡಿಕೆ ಇರುವ ರಕ್ತಕ್ಕೆ ಬದಲಾಗಿ ಏನನ್ನೂ ಕೊಡಲು ಆಗುವುದಿಲ್ಲ ವೈಜ್ಞಾನಿಕವಾಗಿ ಸಾಕಷ್ಟು ಸಂಶೋಧನೆ ನಡೆದಿದ್ದರೂ ಕೃತಕವಾಗಿ ರಕ್ತವನ್ನು ತಯಾರಿಸಲು ಸಾಧ್ಯವಾಗಿಲ್ಲ. ಅನಿವಾರ್ಯವಾಗಿ ರಕ್ತದಾನಿಗಳ ಮೇಲೆ ಅವಲಂಬಿತವಾಗಬೇಕಾಗಿದೆ. ಸ್ವಯಂ ಸ್ಪೂರ್ತಿಯಿಂದ ರಕ್ತದಾನ ಮಾಡುವ ಪದ್ಧತಿ ಆರಂಭವಾಗಬೇಕಾಗಿದೆ, ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾನವೀಯತೆಯ ದೃಷ್ಠಿಯಿಂದ ಬೇರೆಯವರಿಗೆ ರಕ್ತ ನೀಡುವುದೇ ರಕ್ತದಾನವಾಗಿದೆ.

ರಕ್ತದಾನ ಯಾರು ಮಾಡಬಹುದು

  • ೧೮ ರಿಂದ ೬೫ ವರ್ಷದ ಒಳಗಿರುವ ಎಲ್ಲಾ ಮಹಿಳೆಯರು ಮತ್ತು ಪುರುಷರು ರಕ್ತದಾನ ಮಾಡಬಹುದು.
  • ರಕ್ತದಾನಿಯ ದೇಹದ ತೂಕ ಕನಿಷ್ಟ ಲಕ್ಷ ೪೫ ಕೆ.ಜಿಗಿಂತ ಹೆಚ್ಚು  ಇರಬೇಕು.
  • ರಕ್ತದಲ್ಲಿ ಹಿಮೋಗ್ಲೊಬಿನ್ ಅಂಶ ೧೨.೫ಗ್ರಾಂಗಿಂತ ಹೆಚ್ಚು ಇರಲೇಬೇಕು.
  • ಗಂಡಸರು ೩ ತಿಂಗಳಿಗೊಮ್ಮೆ ಮತ್ತು ಹೆಂಗಸರು ೪ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
  • ಒಮ್ಮೆ ರಕ್ತದಾನ ಮಾಡುವಾಗ ೩೫೦ ಎಂ.ಎಲ್. ರಕ್ತ ತೆಗೆಯಲಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ಏನಿಲ್ಲವೆಂದರೂ ಸುಮಾರು ೨೫೦ ಲೀಟರ್ ರಕ್ತದಾನ ಮಾಡಬಹುದು ಮತ್ತು ಸರಿ ಸುಮಾರು ಜೀವಿತ ಅವಧಿಯಲ್ಲಿ ೫೦೦ರಿಂದ ೬೦೦ ಜನರ ಜೀವ ಉಳಿಸಬಹುದು.
  • ದೇಹದ ಉಷ್ಣತೆ ೩೭.೫ ಡಿಗ್ರಿ  ಸೆಲ್ಸಿಯಸ್‌ಗಿಂತ ಜಾಸ್ತಿ ಇರಬಾರದು. ರಕ್ತದಾನಿಗಳು ರಕ್ತದಾನ ಮಾಡುವ ಸಮಯದಲ್ಲಿ ಜ್ವರದಿಂದ  ಬಳಲುತ್ತಿರಬಾರದು. ರಕ್ತದಾನಿಗಳಿಂದ ಪಡೆದ ರಕ್ತವನ್ನು ವಿಶೇಷವಾದ  ಹೆಪ್ಪು ನಿರೋಧಕ ದ್ರವ್ಯಗಳಿರುವ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ದಾನಿಗಳಿಂದ ಪಡೆದ ರಕ್ತವನ್ನು ರಕ್ತದ ಮೂಲಕ ಹರಡಬಹುದಾದ ಹೆಪಟೈಟಿಸ್ ಬಿ. ಮತ್ತು ಸಿ, ಎಚ್.ಐ.ವಿ., ಮಲೇರಿಯಾ, ಸಿಫಿಲಿಸ್ ರೋಗಾಣುಗಳಗಾಗಿ ಪರೀಕ್ಷಿಸಲಾಗುತ್ತದೆ. ಹೀಗೆ ದಾನಿಗಳಿಂದ ಪಡೆದ ರಕ್ತವನ್ನು ಮೇಲೆ ತಿಳಿಸದ ರೋಗಾಣುಗಳಿಲ್ಲವೆಂದು ಖಾತರಿಗೊಳಿಸಿದ ಬಳಿಕವೇ ಬೇರೆ ರೋಗಿಗಳಿಗೆ ರಕ್ತದಾನ ಮಾಡಲು ಉಪಯೋಗಿಸುತ್ತಾರೆ. ಒಂದು ವೇಳೆ ರಕ್ತದಾನಿಗಳಿಂದ  ಪಡೆದ ರಕ್ತ ಮೇಲೆ ಕಾಣಿಸಿದ ರೋಗಾಣುಗಳಿಂದ ಕೂಡಿದ್ದು ಮಲೀನವಾಗಿದ್ದರೆ, ಆ ರಕ್ತವನ್ನು ಬೇರೆ ರೋಗಿಗಳಿಗೆ ಕೊಡಲಾಗುವುದಿಲ್ಲ ಮತ್ತು ಅಂತಹ ಮಲಿನ ರಕ್ತವನ್ನು ವೈಜ್ಞಾನಿಕವಾಗಿ ನಿಷ್ಕ್ರೀಯಗೊಳಿಸಲಾಗುತ್ತದೆ.
  • ದಾನಿಗಳಿಂದ  ಪಡೆದ ರಕ್ತವನ್ನು ರೋಗಾಣು ಮುಕ್ತ ಎಂದು ಖಾತರಿಗೊಳಿಸಿದ ಬಳಿಕ ಶೀತಲೀಕರಣ (ರೆಫ್ರಿಜರೇಟರ್) ಯಂತ್ರಗಳಲ್ಲಿ ಸೂಕ್ತ ಉಷ್ಣತೆಯಲ್ಲಿ ಶೇಖರಿಸಿಡಲಾಗುತ್ತದೆ. ಸಾಮಾನ್ಯವಾಗಿ ಪೂರ್ತಿ ರಕ್ತವನ್ನು(ಹೋಲ್ ಬ್ಲಡ್) ಮತ್ತು ಬೇರ್ಪಡಿಸಿದ ರಕ್ತ ಕಣಗಳನ್ನು ೪ರಿಂದ ೬ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ   ಶೇಖರಿಸಲಾಗುತ್ತದೆ ಮತ್ತು ಇದನ್ನು ಸಮಾರು ೩೨ ರಿಂದ ೪೨ ದಿನಗಳವರೆಗೆ ನೀಡಬಹುದು ಮತ್ತು ಈ ಅವಧಿಯ ಒಳಗೆ ಬೇರೆಯವರಿಗೆ ನೀಡಬಹುದು. ಅವಧಿ ಕಳೆದ ರಕ್ತವನ್ನು ವೈಜ್ಞಾನಿಕವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ. ಕೆಲವೊಮ್ಮೆ ರಕ್ತದಿಂದ ಪ್ಲಾಸ್ಮಾ ಎಂಬ  ಅಂಶವನ್ನು ಬೇರ್ಪಡಿಸಲಾಗುತ್ತದೆ.
  • ಈ ರೀತಿ ಪ್ಲಾಸ್ಮಾವನ್ನು -೪೦ ಡಿಗ್ರಿ ಸೆಲ್ಸಿಯಸ್‌ನಲ್ಲಿ ಒಂದು ವರ್ಷದವರೆಗೆ ಶೇಖರಿಸಿಡಬಹುದು. -೮೦ ಡಿಗ್ರಿ ಸೆಲ್ಸಿಯಸ್‌ನಲ್ಲಿ ೫ ವರ್ಷದಿಂದ ೭ ವರ್ಷಗಳ ಶೇಖರಿಸಿಡಬಹುದು. ಕೆಲವೊಮ್ಮೆ ರಕ್ತದಲ್ಲಿನ ಪ್ಲೇಟ್‌ಲೆಟ್ ಎಂಬ ಅಂಶವನ್ನು ರಕ್ತದಿಂದ ಬೇರ್ಪಡಿಸಿ ೨೨ ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಮಾರು ೫ ದಿನಗಳವರೆಗೆ ಶೇಖರಿಸಿಡಬಹುದು. ಈ ರೀತಿಯ ರಕ್ತಕಣಗಳನ್ನು ಡೆಂಗ್ಯು, ಚಿಕನ್‌ಗುನ್ಯಾ ಮುಂತಾದ ರೋಗಿಗಳಿಗೆ ಮತ್ತು ರಕ್ತ ಹೆಪ್ಪುಗಟ್ಟದಿರುವ ರೋಗಿಗಳ ಚಿಕಿತ್ಸೆಗಾಗಿ ಉಪಯೋಗಿಸುತ್ತಾರೆ. ಆದರೆ ಇಂತಹ ರಕ್ತಕಣಗಳನ್ನು ೫ ದಿನಗಳಿಗಿಂತ ಜಾಸ್ತಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ.

ಯಾರು  ರಕ್ತದಾನ ಮಾಡಬಾರದು 

  • ಯಾವುದಾದರೂ ಹೃದಯ ಸಂಬಂಧ ಕಾಯಿಲೆ, ಯಕೃತಿನ ಕಾಯಿಲೆ ಮತ್ತು ಮೂತ್ರಪಿಂಡದ ಕಾಯಿಲೆ ಇರುವವರು ರಕ್ತದಾನ ಮಾಡಬಾರದು.
  • ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು. (೭೨ಗಂಟೆಗಳ ಕಾಲ )
  • ಅಪಸ್ಮಾರ ಮತ್ತು ಕ್ಷಯರೋಗದಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು.
  • ಯಾವುದೇ ವ್ಯಕ್ತಿ ಕಾಯಿಲೆಯ ವಿರುದ್ಧ ಲಸಿಕೆ ಪಡೆದಿದ್ದರೆ (ವ್ಯಾಕ್ಸಿನೇಶನ್) ಅಂತವರು, ಲಸಿಕೆ ಪಡೆದ ೪ರಿಂದ ೬ ವಾರಗಳ ಕಾಲ ರಕ್ತದಾನ ಮಾಡಬಾರದು.
  • ಹೆಪಟೈಟೀಸ್ ಮತ್ತು ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ ಚಿಕಿತ್ಸೆ ಪಡೆದ ನಂತರದ ೩ರಿಂದ ೬ತಿಂಗಳು ರಕ್ತದಾನ ಮಾಡಬಾರದು.
  • ಆಸ್ಪಿರಿನ್ ಮಾತ್ರೆ ಸೇವಿಸಿದ್ದರೆ ೩ದಿನಗಳವರೆಗೆ ರಕ್ತದಾನ ಮಾಡಬಾರದು.
  • ಹಿಂದಿನ ೩ ತಿಂಗಳಲ್ಲಿ ತಾವು ರಕ್ತದಾನ ಪಡೆದಿದ್ದರೆ ಅಥವಾ ರಕ್ತದ ಅಂಶ ಪಡೆದಿದ್ದಲ್ಲಿ, ಅಂತವರು ರಕ್ತದಾನ ಮಾಡಬಾರದು
  • ಮಹಿಳೆಯರು ತಿಂಗಳ ಮಟ್ಟಿನ ಸಮಯದಲ್ಲಿ, ಗರ್ಭಿಣಿಯಾಗಿದ್ದಾಗ, ಎದೆಹಾಲು ಉಣಿಸುತ್ತಿರುವಾಗ ಮತ್ತು ಹೆರಿಗೆಯ ನಂತರ  ೬ತಿಂಗಳವರೆಗೆ ರಕ್ತದಾನ  ಮಾಡಬಾರದು.
  • ಅಧಿಕ ರಕ್ತದೊತ್ತಡ, ನಿಯಂತ್ರಣವಿಲ್ಲದ ಮಧುಮೇಹ ರೋಗದಿಂದ ಬಳಲುತ್ತಿರುವವರು ರಕ್ತದಾನ ಮಾಡದಿರುವುದು ಉತ್ತಮ.
  • ನಿಯಂತ್ರಣ ವಿರುವ ಮಧುಮೇಹ ರೋಗಿಗಳು ರಕ್ತದಾನ ಮಾಡಬಾರದು.
  • ರಕ್ತ ಹೀನತೆಯಿಂದ (ಹಿಮೋಗ್ಲೊಬಿನ್ ಅಂಶ ೧೨.೫ಕ್ಕಿಂತ ಕಡಿಮೆ ಇರುವವರು) ಬಳಲುತ್ತಿರುವವರು, ಅರ್ಬುದ ರೋಗ (ಕ್ಯಾನ್ಸರ್)ದಿಂದ ಬಳಲುತ್ತಿರುವವರು ಮತ್ತು ಅರ್ಬುದ ರೋಗಕ್ಕೆ ಔಷಧ ತೆಗೆದುಕೊಳ್ಳುತ್ತಿರುವವರು (ಕಿಮೊಥೆರಫಿ) ರಕ್ತದಾನ ಮಾಡುವುದು ಸೂಕ್ತವಲ್ಲ.
  • ಯಾವುದೇ ವ್ಯಕ್ತಿ ಬೃಹತ್ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಲ್ಲಿ ಒಂದು ವರ್ಷದವರೆಗೆ ರಕ್ತದಾನ ಮಾಡಬಾರದು ಮತ್ತು ಸಣ್ಣ ಪ್ರಮಾಣದ ಚಿಕಿತ್ಸೆಗೆ ಒಳಗಾಗಿರುವವರು, ೩ರಿಂದ ೬ತಿಂಗಳ ಕಾಲ ರಕ್ತದಾನ ಮಾಡಬಾರದು
  • ಕಾಮಾಲೆ (ಜಾಂಡಿಸ್) ಮತ್ತು ಹೆಚ್.ಐ.ವಿ. (ಏಡ್ಸ್) ಮತ್ತು ಸಿಫಿಲಿಸ್ ಮುಂತಾದ ಲೈಗಿಂಕ ಕಾಯಿಲೆ ಇರುವವರು ರಕ್ತದಾನ ಮಾಡಬಾರದು.
  • ಹೆಪಟೈಟಿಸ್ ಬಿ. ಮತ್ತು ಸಿ ಎಂನ ಯಕೃತಿಕೆ ಸಂಬಂಧಿಸಿದ ಕಾಯಿಲೆ ಇರುವವರು ರಕ್ತದಾನ ಮಾಡಬಾರದು.
  • ವಾಂತಿಬೇಧಿ ಮತ್ತು ಜ್ವರದಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು.
  • ಯಾವುದೇ ಸೂಕ್ತ ಕಾರಣವಿಲ್ಲದೆ ದೇಹದ ತೂಕದಲ್ಲಿ ತುಂಬಾ ಏರುಪೇರಾಗಿದ್ದಲ್ಲಿ (ಕಳೆದ ೬ತಿಂಗಳಲ್ಲಿ) ಸರಿಯಾದ ಮಾರ್ಗದರ್ಶನ ಮತ್ತು ಪರೀಕ್ಷೆ ನಡೆಸದೇ ರಕ್ತದಾನ ಮಾಡಬಾರದು.
  • ಅಲರ್ಜಿ ಮತ್ತು ವಿಪರೀತ ಅಸ್ಥಮ ರೋಗಗಳಿಂದ ಬಳಲುತ್ತಿರುವವರು ರಕ್ತದಾನ ಮಾಡದಿರುವುದೆ ಉತ್ತ,ಮ.
  • ಚಿಕನ್‌ಗುನ್ಯ, ಡೆಂಗ್ಯೂ ಜ್ವರ  ಬಂದು ೬ತಿಂಗಳುಗಳ ಕಾಲ ರಕ್ತದಾನ ಮಾಡಬಾರದು.
  • ಹುಚ್ಚು ನಾಯಿ ಕಚ್ಚಿದಕ್ಕೆ ಲಸಿಕೆ ಹಾಕಿಸಿಕೊಂಡಿದ್ದಲ್ಲಿ ಒಂದು ವರ್ಷಗಳ ಕಾಲ ರಕ್ತದಾನ ಮಾಡಬಾರದು.
  • ಕಳೆದ ೧೫ದಿನಗಳಿಂದ ಕಾಲರಾ, ಟೈಫಾಯಿಡ್, ಡಿಫ್ತೀರಿಯಾ, ಟೆಟನಸ್, ಪ್ಲೇಗ್ ಮುಂತಾದ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸಿಕೊಂಡಿದ್ದಲ್ಲಿ ರಕ್ತದಾನ ಮಾಡಬಾರದು.
  • ದೈಹಿಕವಾಗಿ ರಕ್ತದಾನಕ್ಕೆ ಅರ್ಹನಾಗಿದ್ದರೂ, ಮಾನಸಿಕವಾಗಿ ರಕ್ತದಾನ ಮಾಡಲು ಹಿಂಜರಿಕೆ ಇದ್ದಲ್ಲಿ ದಾಕ್ಷಿಣ್ಯ ಪೂರ್ವಕವಾಗಿ ರಕ್ತದಾನ ಮಾಡಬಾರದು, ಅಂತಹ ವ್ಯಕ್ತಿಗೆ ವಿಶೇಷವಾದ ಸಂದರ್ಶನ ನಡೆಸಿ ರಕ್ತದಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ರಕ್ತದಾನದ ಬಗ್ಗೆ ಇರುವ ಸಂದೇಹಗಳನ್ನು ನಿವಾರಿಸಿದ ಬಳಿಕವೇ, ತಜ್ಞ ವೈದ್ಯರ ಸಮುಖದಲ್ಲಿ ವಿಶೇಷ ಮುತುವರ್ಜಿ ವಹಿಸಿ ರಕ್ತದಾನದ ಪ್ರಕ್ರಿಯೆಯನ್ನು ನಡೆಸತಕ್ಕದ್ದು.

 

ರಕ್ತದಾನದಿಂದ ಆಗುವ ಪ್ರಯೋಜನಗಳು

  • ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ, ದಾನಿಯ ದೇಹದಲ್ಲಿ ಮತ್ತಷ್ಟು ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆ ಆಗುತ್ತದೆ. ಒಮ್ಮೆ ರಕ್ತದಾನ ಮಾಡುವಾಗ ಕೇವಲ ೩೫೦ರಿಂದ ೪೫೦ ಎಂ.ಎಲ್. ವರೆಗೆ (ವ್ಯಕ್ತಿಯ ದೇಹದ ತೂಕವನ್ನು ಅವಲಂಬಿಸಿ) ರಕ್ತ ತೆಗೆಯಲಾಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಯೊಬ್ಬರ ದೇಹದಲ್ಲಿ ೫ರಿಂದ ೬ ಲೀಟರ್ ರಕ್ತವಿರುವುದರಿಂದ, ರಕ್ತದಾನಿಗಳಿಗೆ ಯಾವುದೇ ರೀತಿಯ ವ್ಯತಿರಕ್ತ ಪರಿಣಾಮ ಉಂಟಾಗುವುದಿಲ್ಲ ಮತ್ತು ದೇಹದೊಳಗಿನ ಮೂಳೆಯ ಒಳಗಿರುವ ಅಸ್ತಿಮಜ್ಜೆಯಲ್ಲಿ ಮತ್ತಷ್ಟು ರಕ್ತ ಉತ್ಪತ್ತಿಯಾಗಲು ಪ್ರಚೋದನೆ ನೀಡಿ ವ್ಯಕ್ತಿಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನೇ ಬೀರುತ್ತದೆ.
  • ದೇಹದಲ್ಲಿ ಮತ್ತಷ್ಟು ಹೊಸ ರಕ್ತ ಉತ್ಪತ್ತಿಯಾಗಿ, ರಕ್ತ ಸಂಚಲನೆ ಹೆಚ್ಚಾಗಿ ವ್ಯಕ್ತಿಯ ಕಾರ್ಯ ತತ್ಪರತೆ, ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ.
  • ರಕ್ತದಲ್ಲಿ ಕೊಬ್ಬಿನ ಪ್ರಮಾಣ (ಕೊಲೆಸ್ಟ್ರಾಲ್) ಕಡಿಮೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಳೆ ರಕ್ತಕಣಗಳು ಹೋಗಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ಕೊಬ್ಬಿನ ಪ್ರಮಾಣ ಕೂಡಾ ಕಡಿಮೆಯಾಗುತ್ತದೆ.
  • ಹೃದಯಾಘಾತವನ್ನು ರಕ್ತದಾನ ಖಂಡಿತವಾಗಿಯೂ ತಡೆಯುವ ಪ್ರಕ್ರಿಯೆಗೆ ಧನಾತ್ಮಕ ಪರಿಣಾಮ ಬೀರುತ್ತದೆ.  ಇದು ವೈಜ್ಞಾನಿಕವಾಗಿ ಸಂಶೋಧನೆಗಳಿಂದ ನಿರೂಪಿಸಲ್ಪಟ್ಟಿದೆ. ಆದುದರಿಂದ ಹೃದಯಾಘಾತಕ್ಕೆ ಪೂರಕವಾದ ದೇಹ ಪ್ರಕ್ರಿಯೆ ಉಳ್ಳವರು ಹೆಚ್ಚು ಹೆಚ್ಚು ರಕ್ತದಾನ ಮಾಡಿದ್ದಲ್ಲಿ ಹೃದಯಾಘಾತವನ್ನು ತಪ್ಪಿಸಬಹುದು.
  • ಅಧಿಕ ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ರಕ್ತದಾನ ಹೆಚ್ಚು ಸಹಾಯ ಮಾಡುತ್ತದೆ.
  • ಎಲ್ಲಕ್ಕಿಂತ ಮಿಗಿಲಾಗಿ ನಾಲ್ಕು ಜೀವವನ್ನು ಉಳಿಸಿದ ಸಾರ್ಥಕತೆ ರಕ್ತದಾನಿಗಳಿಗೆ ಉಚಿತವಾಗಿ ದೊರಕುತ್ತದೆ. ರಕ್ತದಾನದಿಂದ ಸಿಗುವ ಸಂತೃಪ್ತಿ ಮತ್ತು ಸಾರ್ಥಕತೆಗೆ ಯವುದೇ ಬೆಲೆ ಕಟ್ಟಲಾಗದು. ಶಾಲಾ ಕಾಲೇಜುಗಳು, ರೋಟರಿ, ಲಯನ್ಸ್, ಜೇಸಿಸ್, ರೆಡ್‌ಕ್ರಾಸ್ ಮುಂತಾದ ಸಂಘ ಸಂಸ್ಥೆಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಇನ್ನಷ್ಟು ಆಯೋಜಿಸಬೇಕು ಮತ್ತು ರಕ್ತದಾನದ ಮಹತ್ವ ಪ್ರಯೋಜನಗಳ ಬಗ್ಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಆಗಾಗ ಆಯೋಜಿಸಬೇಕು. ಆ ಮೂಲಕ ರಕ್ತದಾನಕ್ಕೆ ಯಾರು ಅರ್ಹರು, ಯಾರು ಅನರ್ಹರು  ಮತ್ತು ರಕ್ತದಾನ ಪರಿಪೂರ್ಣ, ಸುರಕ್ಷಿತ, ಅದರಿಂದ ಯಾವುದೇ ಅಪಾಯವಿಲ್ಲ ಎಂಬ ಸಂದೇಶವನ್ನು ಜನಸಾಮಾನ್ಯರು ವಿದ್ಯಾರ್ಥಿಗಳಿಗೆ ತಿಳಿಸಿ ಮನವರಿಕೆ ಮಾಡಬೇಕು. ಹಾಗೆ ಮಾಡಿದಾಗ ಮಾತ್ರ ಹೆಚ್ಚು ಹೆಚ್ಚು ಜನರು ರಕ್ತದಾನದ ಬಗ್ಗೆ ಒಲವು ತೋರಬಹುದು ಮತ್ತು ರಕ್ತದಾನದಂತಹ ಪವಿತ್ರ ಕಾರ್ಯಕ್ಕೆ ಮುಂದೆ ಬರಬಹುದು. ಹೀಗಾದಾಗ ಮಾತ್ರವೇ ನಮ್ಮ ದೇಶದಲ್ಲಿ ಈಗಿರುವ ರಕ್ತದ ಅವಶ್ಯಕತೆಗಳನ್ನು ಪೂರೈಸಿ ರಕ್ತದ ಕೊರತೆಯನ್ನು ನೀಗಿಸಲು ಸಹಕಾರಿಯಾಗಬಹುದು.

ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ 

೧೯೦೧ರಲ್ಲಿ ಕಾರ್ಲ್ ಲಾಂಡ್ ಸ್ಟೈನರ್ ಎಂಬ ಆಸ್ಟ್ರಿಯಾ ದೇಶದ ವೈದ್ಯರು ರಕ್ತದ  ಗುಂಪುಗಳ ವರ್ಗಿಕರಣವನ್ನು ನೀಡಿದರು. ಆ ಕಾರಣಕ್ಕಾಗಿಯೇ ಆತನ ಜನ್ಮ ದಿನಾಂಕ ಜೂನ್ ೧೪ರಂದು ವಿಶ್ವ ರಕ್ತದಾನಿಗಳ ದಿವಸ ಎಂದು ಆಚರಿಸಲಾಗುತ್ತದೆ. ಅದೇ ರೀತಿ ಆಕ್ಟೋಬರ್ ೧ರಂದು ರಾಷ್ಟ್ರೀಯ ರಕ್ತದಾನ ದಿವಸ ಎಂದು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.

ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನ, ರಕ್ತದಾನಕ್ಕಿಂತ ಮಿಗಿಲಾದ ದೊಡ್ಡ ದಾನ ಇನ್ನೊಂದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಜೀವಮಾನದಲ್ಲಿ ನಾಲ್ಕೈದು ಬಾರಿಯಾದರೂ ರಕ್ತದಾನ ಮಾಡಲೇಬೇಕು. ಆರೋಗ್ಯವಂತ ವ್ಯಕ್ತಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ರಕ್ತದಾನಿಯ ಆರೋಗ್ಯ ಸಮತೋಲನದಲ್ಲಿ ಇರುತ್ತದೆ ಎಂದರೂ ಅತಿಶಯೋಕ್ತಿಯಲ್ಲ. ಆರೋಗ್ಯವಂತ ಪುರುಷರು ವರ್ಷದಲ್ಲಿ ಮೂರರಿಂದ ನಾಲ್ಕುಬಾರಿ ಹಾಗೂ ಮಹಿಳೆಯರು ಎರಡರಿಂದ ಮೂರು ಬಾರಿ ನಿಯಮಿತವಾಗಿ ರಕ್ತದಾನ ಮಾಡಬಹುದು. ನಮ್ಮ ದೇಶದ ರಕ್ತದ ಅವಶ್ಯಕತೆಯ ಪ್ರತಿಶತ ೭೦ ಶೇಕಡಾ ರಕ್ತ ಮಾತ್ರ ರಕ್ತದಾನಿಗಳಿಂದ ಪೂರೈಸಲ್ಪಡುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ರಕ್ತವನ್ನು ರಕ್ತದಾನಿಗಳ ದಾನದಿಂದಲೇ ಪಡೆಯಬೇಕಾದ ಅನಿವಾರ್ಯತೆ ಇದೆ.

ವಿದ್ಯಾದಾನ, ಅನ್ನದಾನ ಮತ್ತು ರಕ್ತದಾನ ಇವು ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನಗಳು. ರಕ್ತ ಒಂದು ಸಂಜೀವಿನಿ ಇದ್ದಂತೆ. ಅದಕ್ಕೆ ಪರ್‍ಯಾಯವಾದ ವಸ್ತುವಿಲ್ಲ. ರಕ್ತ ಏನಿದ್ದರೂ ನಮ್ಮ ದೇಹದಲ್ಲಿಯೇ ಉತ್ಪಾದನೆಯಾಗಬೇಕು. ಅನೇಕ ತುರ್ತು ಪರಿಸ್ಥಿತಿಗಳಲ್ಲಿ ರಕ್ತವನ್ನು ಇನ್ನೊಬ್ಬರಿಂದ ತೆಗೆದು ಅಗತ್ಯವಿರುವವರಿಗೆ ಕೊಡಲಾಗುತ್ತಿದೆ.  ಇಂತಹ ಸಮಯದಲ್ಲಿ ಅವಶ್ಯಕತೆ ಇರುವ ರಕ್ತ ದೊರಕಿದರೆ ಮಾತ್ರ  ಜೀವ ಉಳಿಸಲು ಸಾಧ್ಯ. ಆದ್ದರಿಂದಲೇ ರಕ್ತದಾನವನ್ನು ಜೀವದಾನ ಎಂದು ಕರೆಯಲಾಗುತ್ತದೆ. ವಿಶ್ವದಲ್ಲಿ ಪ್ರತೀ ಕ್ಷಣಕ್ಕೊಮ್ಮೆ  ಯಾರದರೊಬ್ಬರಿಗೆ ರಕ್ತದ ಅಗತ್ಯವಿರುತ್ತದೆ. ದೇಹದಲ್ಲಿ ಆರೋಗ್ಯವಂತ ರಕ್ತವಿದ್ದರೆ ಸಾಲದು, ರಕ್ತದಾನ ಮಾಡಿ ಜೀವ ಉಳಿಸಬಲ್ಲ ಉದಾರ ಮನಸ್ಸು ಪ್ರತಿಯೊಬ್ಬರಿಗೂ ಬೇಕು.

ಬನ್ನಿ ಗೆಳೆಯರೇ, ನಾವೆಲ್ಲಾ ಒಂದಾಗೋಣ. ಜಾತಿ, ಮತ, ಧರ್ಮ, ಲಿಂಗಬೇಧವನ್ನು ಬದಿಗಿಟ್ಟು ನಾವೆಲ್ಲಾ ಒಂದೇ ಎಂದು ವಿಶ್ವಮಾನವತ್ವವನ್ನು  ಸಾರೋಣ. ರಕ್ತದಾನ ಮಾಡಿ ಜೀವದಾನ ಮಾಡೋಣ. ದೇಶದ ಮತ್ತು ವಿಶ್ವದ ಶಾಂತಿಯಲ್ಲಿ ನಮ್ಮ ಭವಿಷ್ಯ ಅಡಗಿದೆ.

(ಲೇಖಕರು ವೈದ್ಯರು ಹಾಗೂ ದ.ಕ.ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್)

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ