ಕಲ್ಲಡ್ಕದ ವಿದ್ಯಾರ್ಥಿಗಳಿಗೆ ಕೊಲ್ಲೂರಿನಿಂದ ಬರುತ್ತಿದ್ದ ಹಣಕಾಸು ನೆರವನ್ನು ಸ್ಥಗಿತಗೊಳಿಸಿದ ಸಂದರ್ಭ, ದೇವಸ್ಥಾನದ ದುಡ್ಡನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸರಕಾರ ಸಮರ್ಥಿಸಿಕೊಂಡಿತ್ತು. ಆದರೆ ಈಗ ಪ್ರಾಕೃತಿಕ ವಿಕೋಪ ಸಂದರ್ಭ ದೇವಸ್ಥಾನಗಳಲ್ಲಿ ಸಂಗ್ರಹಗೊಂಡ ದುಡ್ಡನ್ನು ಸರಕಾರ ತನ್ನ ಖಾತೆಗೆ ವರ್ಗಾಯಿಸಿಕೊಳ್ಳುವ ದ್ವಂದ್ವ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಹಿರಿಯ ಆರೆಸ್ಸೆಸ್ ಮುಖಂಡ, ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಕಲ್ಲಡ್ಕದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ,ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸುತ್ತಿದೆ. ಆರೆಸ್ಸೆಸ್ ಕೇರಳ ಮತ್ತು ಕೊಡಗು ಸಂತ್ರಸ್ತರ ಸಹಾಯಕ್ಕೆ ಎಲ್ಲರಿಗಿಂತ ಮೊದಲು ಧಾವಿಸಿದ ಸಂಘಟನೆ. ಆದರೆ ದೇವಸ್ಥಾನಗಳಲ್ಲಿ ಸಂಗ್ರಹವಾದ ದುಡ್ಡನ್ನು ಪ್ರಾಕೃತಿಕ ವಿಕೋಪ ಉದ್ದೇಶಕ್ಕೆ ಬಳಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ಆಕ್ಷೇಪವಿದೆ ಎಂದರು. ಇಡೀ ದೇಶದಲ್ಲಿ ಸಮಸ್ಯೆ ಬಂದರೂ ಹಿಂದುಗಳು, ಹಿಂದುಗಳ ಸಂಘಟನೆ ಪರಿಸ್ಥಿತಿಗಳನ್ನು ನಿಭಾಯಿಸಿವೆ ಎಂದು ಭಟ್ ಹೇಳಿದರು.