ವಿದ್ಯಾಭಾರತಿ ಅಖಿಲಭಾರತ ಶಿಕ್ಷಾ ಸಂಸ್ಥಾನ್ ವಿದ್ಯಾಭಾರತಿ ಕರ್ನಾಟಕ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಜಂಟಿ ಆಶ್ರಯದಲ್ಲಿ ಸೆ. 28,29 ರಂದು ವಿದ್ಯಾಭಾರತಿ ಸಂಸ್ಥಾನದ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವಿಭಾಗದ ರಾಷ್ಟ್ರ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಮಂಗಳೂರು ವಿಶ್ವವಿದ್ಯಾನಿಲಯದ ಒಳ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಗುರುವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಕಲ್ಲಡ್ಕ ಹನುಮಾನ್ ನಗರದ ಭಾರತರತ್ನ ಅಟಲ್ ಬಿಹಾರ್ ವಾಜಪೇಯಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕಿಶೋರ್ ಕುಮಾರ್ ಅವರು ಪಂದ್ಯಾಟವನ್ನು ಉದ್ಘಾಟಿಸುವರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬಿಲಾಸ್ ಪುರ್ ಸರಸ್ವತಿ ಉಪಾಧ್ಯಕ್ಷ ಸಂತೋಷ್ ತಿವಾರಿ, ಕರ್ನಾಟಕ ವಿದ್ಯಾವರ್ಧಕ ಅಧ್ಯಕ್ಷ ಸುಂದರ್ ರಾಂ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಸೆ.೨೯ ರಂದು ಸಂಜೆ ೬:೩೦ಕ್ಕೆ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಸಂಜೆ ೭ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ದೇಶದ ೨೯ ರಾಜ್ಯಗಳ ಒಟ್ಟು ೧೧ ಕ್ಷೇತ್ರಗಳಿಂದ ಸುಮಾರು ೩೦೦ ಕ್ರೀಡಾಪಟುಗಳು ಪಂದ್ಯದಲ್ಲಿ ಭಾಗವಹಿಸುವರು. ಬಾಲ, ಕಿಶೋರ, ತರುಣ ವರ್ಗಗಳಲ್ಲಿ ಪ್ರತ್ಯೇಕವಾಗಿ ಬಾಲಕ–ಬಾಲಕಿಯರಿಗೆ ಸ್ಪರ್ಧೆ ನಡೆಯಲಿದೆ. ಪಂದ್ಯಾಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉತ್ತರ ಭಾರತ ಶೈಲಿಯ ಉಟೋಪಚಾರ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾಭಾರತಿಯ ಕ್ರೀಡಾ ವಿಭಾಗ ಪ್ರಮುಖರಾದ ಕೆ.ಆರ್.ಕೆ.ಸತ್ಯನಾರಾಯಣ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್, ವಿದ್ಯಾಭಾರತಿ ಕರ್ನಾಟಕ ಶಾರೀರಿಕ ವಿಭಾಗ ಪ್ರಮುಖ್ ಆನಂದ್, ಪದವಿ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.