ಬಿ.ಸಿ.ರೋಡಿನಲ್ಲಿ ಸಹಕಾರ ಭಾರತಿ ವತಿಯಿಂದ ನಡೆಯಿತು ರೈತರ ಪ್ರತಿಭಟನೆ
ಸಹಕಾರ ಭಾರತಿ ಬಂಟ್ವಾಳ ತಾಲೂಕು ವತಿಯಿಂದ ರೈತರ ಹಲವು ಸಮಸ್ಯೆಗಳಿಗೆ ಧ್ವನಿಯಾಗಿ ಪ್ರತಿಭಟನೆ ಬಂಟ್ವಾಳ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಮುಂಭಾಗ ಬುಧವಾರ ನಡೆಯಿತು. ಅಲ್ಲಿ ಕೇಳಿಬಂದ ಬೇಡಿಕೆಗಳು ಇವು.
ಬಂಟ್ವಾಳ ತಾಲೂಕಿನ ರೈತರು ಬೆಳೆಯುವ ಬೆಳೆ ನಾಶಗೊಂಡು ಅಡಕೆ, ಕಾಳುಮೆಣಸು, ಕೊಕ್ಕೊ ಮತ್ತಿತರ ಬೆಳೆಗಳು ವಿಪರೀತ ಮಳೆಯಿಂದಾಗಿ ಕೊಳೆರೋಗಕ್ಕೆ ತುತ್ತಾಗಿ ಸಂಪೂರ್ಣ ನಾಶಗೊಂಡಿವೆ. ಭತ್ತದ ಕೃಷಿಯೂ ನಾಶವಾಗಿದೆ ಹಲವಾರು ಅಡಕೆ ತೋಟಗಳು ವಿಪರೀತ ಕೊಳೆರೋಗಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿದೆ. ಕೃಷಿಯನ್ನೇ ನಂಬಿದ ರೈತರ ಬದುಕು ಶೋಚನೀಯವಾಗಿದೆ. ಅನ್ನದಾತನ ಕಷ್ಟಕ್ಕೆ ಸರಕಾರ ತಕ್ಷಣ ಸ್ಪಂದಿಸಿ, ದಕ್ಷಿಣ ಕನ್ನಡದ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರೈತರು ತಮ್ಮ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಭದ್ರತೆಗಾಗಿ ಸಹಕಾರಿ ವ್ಯವಸಾಯ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇಟ್ಟಿರುವ ಹಣವನ್ನು ಕೃಷಿ ಸಾಲ ಮನ್ನಾಕ್ಕೆ ಹೊಂದಾಣಿಕೆಗೊಳಿಸಬೇಕು ಎಂಬ ಸರಕಾರದ ಷರತ್ತನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಯು. ರಾಜೇಶ್ ನಾಯ್ಕ್ ರೈತರಿಗೆ ಸರಿಯಾದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ತಾನೋರ್ವ ರೈತನ ನೆಲೆಯಲ್ಲಿ ಶಾಸಕನಾಗಿ ರೈತರ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ವಿಧಾನಸಭೆಯಲ್ಲಿ ಧ್ವನಿ ಎತ್ತುವುದಾಗಿ ಹೇಳಿದ ಅವರು, ಅತಿವೃಷ್ಠಿಯಿಂದಾಗಿ ಅಡಕೆ ಕೊಳೆರೋಗ ಬಾಸಿ ಸಂಪೂರ್ಣ ನಾಶವಾಗಿದ್ದರೂ,ಸರಕಾರ ನೀಡುವ ಜುಜುಬಿ ಪರಿಹಾರ ರೈತನಿಗೆ ಮಾಡುವ ಅವಮಾನವಾಗಿದೆ ಈ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪದಡಿ ರೈತನಿಗೆ ಪರಿಹಾರ ನೀಡುವಂತೆ ಈಗಾಗಲೇ ಖುದ್ದು ಮುಖ್ಯಮಂತ್ರಿಯವನ್ನು ಭೇಟಿಯಾಗಿ ಮಾನವರಿಕೆ ಮಾಡಿದ್ದು, ಜಿಲ್ಲಾಧಿಕಾರಿಯವರಲ್ಲೂ ಈ ಕುರಿತು ಚರ್ಚಿಸಿರುವುದಾಗಿ ತಿಳಿಸಿದರು.
ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಮಾತನಾಡಿ, ಮುಖ್ಯಮಂತ್ರಿಯವರು ದಿನಕ್ಕೊಂದು ಹೇಳಿಕೆ ನೀಡಿ ರೈತರನ್ನು ಗೊಂದಲಕ್ಕೆ ತಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಸರಕಾರ ಎಚ್ಚೆತ್ತು ರೈತನ ಸಮಸ್ಯೆಯನ್ನು ಅಲಿಸಿ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಇಂದು ಕೃಷಿಕರು ಸಂಕಷ್ಟದ ಸ್ಥಿತಿಯಲ್ಲಿದ್ದು, ಸರಕಾರದ ನೀತಿಯಿಂದಾಗಿ ಮತ್ತಷ್ಟು ಸಮಸ್ಯೆ ಅನುಭವಿಸುವಂತಾಗಿದೆ ಎಂದರು.
ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಸಭಾಧ್ಯಕ್ಷತೆ ವಹಿಸಿದ್ದರು.ಸಹಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಹರೀಶ್ ಆಚಾರ್ಯ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಕೀಲೆ ಸುಮನಶರಣ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಹಕಾರ ಭಾರತಿಯ ಪ್ರಮುಖರಾದ ಪ್ರಸನ್ನ ಸುಳ್ಯ, ಜಿ.ಆನಂದ,ಲಕ್ಷ್ಮಿನಾರಾಯಣ ಉಡುಪ, ಜಿಪಂಸದಸ್ಯ ರವೀಂದ್ರ ಕಂಬಳಿ,ಜಯಶಂಕರ ಬಾಸ್ರಿಂತ್ತಾಯ,ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ,ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ,ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್,ಎಪಿಎಂಸಿ ಮಾಜಿ ಅಧ್ಯಕ್ಷರಾದ ತನಿಯಪ್ಪ ಪೂಜಾರಿ,ರೋನಾಲ್ಡ್ ಡಿಸೋಜ,ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಭಟ್ ಮೊದಲಾದವರಿದ್ದರು.
ತಾಲೂಕು ಸಹಕಾರ ಭಾರತಿ ಅಧ್ಯಕ್ಷ ಸುಧಾಕರ ರೈ ಸ್ವಾಗತಿಸಿದರು. ಮೋನಪ್ಪ ದೇವಸ್ಯ ನಿರ್ವಹಿಸಿದರು.ಬಳಿಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.