ಕವರ್ ಸ್ಟೋರಿ

ಅರಮನೆ ಪ್ರವೇಶಕ್ಕೆ ಮುಹೂರ್ತಕ್ಕಾಗಿ ಕಾಯುತ್ತಿದೆ ಖಜಾನೆ

ಹರೀಶ ಮಾಂಬಾಡಿ, ಬಂಟ್ವಾಳ ನ್ಯೂಸ್

ಅರಮನೆಯಂಥ ಮಿನಿ ವಿಧಾನಸೌಧ ಅಚ್ಚ WHITE ಬಣ್ಣದ ಹೊಳಪು ಕಳೆದುಕೊಳ್ಳುತ್ತಿದೆ. ಮಂಗಳವಾರ ಬಂದರೆ ಜನರೇಟರ್ ಗೆ ಡೀಸೆಲ್ ಯಾರು ಹಾಕೋದು ಎಂಬ ತಲೆಬಿಸಿ. ಸಂಜೆ ಕಳೆದ ಬಳಿಕ ಇರುಳಾದ ಮೇಲೆ ಈ ಕಟ್ಟಡ ಅಂದವನ್ನು ದೀಪದ ಬೆಳಕಲ್ಲಿ ನೋಡುತ್ತಾ ಕುಳಿತುಕೊಳ್ಳಲು ಇದನ್ನು ಕಟ್ಟಿದ್ದಲ್ಲ. ಒಂದೇ ಸೂರಿನಲ್ಲಿ ಎಲ್ಲ ಸರಕಾರಿ ಕಚೇರಿಗಳೂ ಇಲ್ಲಿ ಬಂದು ಕಾರ್ಯಭಾರ ಮಾಡಬೇಕು ಎಂಬುದೇ ಇದರ ಕಾನ್ಸೆಪ್ಟು.

ಆದರೆ ಇನ್ನೂ ಮಿನಿ ವಿಧಾನಸೌಧದೊಳಗೆ ತಾಲೂಕಿನ ಟ್ರೆಜರಿ ಪ್ರವೇಶಿಸಲೇ ಇಲ್ಲ. ಅದೀಗಲೂ ತಾಪಂ ಕಟ್ಟಡದಲ್ಲಿದೆ. ಹಾಗಾದರೆ ಮಿನಿ ವಿಧಾನಸೌಧದಲ್ಲಿ ಏನಿದೆ? ಆಧಾರ್, ಸಬ್ ರಿಜಿಸ್ಟ್ರಾರ್, ರೆವೆನ್ಯೂ, ಸರ್ವೆ ಹೀಗೆ ತಾಲೂಕಿನ ಪ್ರಮುಖ ಕಚೇರಿಗಳು, ನಾಡ ಕಚೇರಿ ಸಹಿತ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ಕಚೇರಿಗಳು ಇಲ್ಲಿವೆ. ಆದರೂ ಹಣಕಾಸಿನ ವಹಿವಾಟಿಗೆ ಪ್ರಮುಖ ಕಚೇರಿಯಾಗಿರುವ ಖಜಾನೆ ಬರಲು ಇನ್ನೂ ಮುಹೂರ್ತ ಸಿದ್ಧವಾಗಬೇಕು.

ಸಾಮಾಜಿಕ ಭದ್ರತಾ ಪಿಂಚಣಿ ಸಹಿತ ಬಂಟ್ವಾಳದ ಎಲ್ಲ ಸರಕಾರಿ ಕಚೇರಿಗಳ ಹಣಕಾಸಿನ ವಹಿವಾಟು ನಡೆಯುವುದು ಸರಕಾರಿ ಖಜಾನೆಯ ಮೂಲಕ. ಇದು ಕರ್ನಾಟಕ ರಾಜ್ಯ ವಿಸ್ತ*ತ ಜಾಲ ಯೋಜನೆಯಡಿ ನಡೆಯುವ ಕಾರಣ ಹಣಕಾಸಿನ ವಹಿವಾಟು ಆನ್ ಲೈನ್ ಮೂಲಕ ನಡೆಯುತ್ತದೆ.

ಹೀಗಾಗಿ ಒಂದು ಟವರ್ ಹಾಗೂ ಬ್ಯಾಕಪ್ ವಿದ್ಯುತ್ ಪವರ್ ಸಹಿತ ಆಧುನಿಕ ಸೌಲಭ್ಯಗಳು ಖಜಾನೆಗೆ ಅಗತ್ಯ. ಹಳೇ ಕಟ್ಟಡವನ್ನು ಕೆಡಹುವ ಸಂದರ್ಭ ಖಜಾನೆಯನ್ನು ಈಗಿನ ತಾಲೂಕು ಪಂಚಾಯತ್ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಮಿನಿ ವಿಧಾನಸೌಧ ನಿರ್ಮಾಣಗೊಂಡು ಉದ್ಘಾಟನೆಗೊಂಡ ಬಳಿಕ ಖಜಾನೆ ಮರಳಲೇ ಇಲ್ಲ. ಇದಕ್ಕೆ ಪೊಲೀಸ್ ಪಹರೆ ಮ್ಯಾಪಿಂಗ್ ಆಗಿಲ್ಲ ಎನ್ನುತ್ತಾರೆ ಬಂಟ್ವಾಳದ ಪ್ರಭಾರ ಉಪಖಜಾನಾಕಾರಿ. ಈಗಾಗಲೇ ಈ ಕುರಿತು ಬರೆಯಲಾಗಿದೆ. ಖಜಾನೆಗೆ ಸೆಂಟ್ರಿಗಳನ್ನು ಪೊಸಿಶನ್ ತೆಗೆದುಕೊಳ್ಳುವಂತೆ ಮಾಡಲು ಪೊಲೀಸ್ ಪಹರೆ ಮ್ಯಾಪಿಂಗ್ ಮಾಡುವ ಕ್ರಮವಿದೆ. ಆ ಪ್ರಕ್ರಿಯೆ ವಿಳಂಬವಾಗಿದೆ. ಅದು ನಡೆದರೆ ಖಜಾನೆ ಮಿನಿ ವಿಧಾನಸೌಧಕ್ಕೆ ಹೋಗಬಹುದು ಎನ್ನುತ್ತಾರೆ ಅವರು. ಮಿನಿ ವಿಧಾನಸೌಧಕ್ಕೆ ನಿಗದಿಗೊಳಿಸಿದ ಜಾಗದಲ್ಲಿ ಖಜಾನೆ ಕಚೇರಿಯನ್ನು ವರ್ಗಾಯಿಸಲು ಪ್ರಯತ್ನಕ್ಕೆ ಇದುವರೆಗೂ ಚಾಲನೆ ದೊರಕದ ಕಾರಣ, ಈಗಿರುವ ಇಕ್ಕಟ್ಟಿನ ತಾಪಂ ಕಟ್ಟಡದಲ್ಲೇ ವೈಡ್ ಏರಿಯಾ ನೆಟ್ವರ್ಕ್ ಟವರ್, ಎಸಿ, ಜನರೇಟರ್ ಸಹಿತ ಖಜಾನೆಗೆ ಬೇಕಾದ ಎಲ್ಲ ಸವಲತ್ತುಗಳನ್ನು ಹಾಕಲಾಗಿದೆ.

ಹೋಟೆಲ್ ಚೆನ್ನಾಗಿದೆ ಎಂದು ಮನೆ ಬಿಟ್ಟು ಅಲ್ಲೇ ಕೂರೋದಕ್ಕಾಗುತ್ಯೇ? ಅಲ್ವಾ?

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts