www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕೊಡಗು ನೆರೆ ಸಂತ್ರಸ್ತರ ನಿಧಿಗೆ ದೇಣಿಗೆ ನೀಡುವ ನಿಟ್ಟಿನಲ್ಲಿ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರಲ್ಲಿ ಶನಿವಾರ ಸಂಜೆ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಸಾರಥ್ಯದಲ್ಲಿ ಜಿಲ್ಲೆಯ ಸಿನಿಮಾ ಮತ್ತು ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ತುಳು ಯಕ್ಷ ಹಾಸ್ಯ ವೈಭವ ನಡೆಯಿತು.
ಯಕ್ಷಗಾನದ ಆಯ್ದ ಹಾಸ್ಯ ತುಣುಕುಗಳನ್ನು ಉಚಿತವಾಗಿ ಪ್ರದರ್ಶಿಸಿ ನೆರೆ ಸಂತ್ರಸ್ತರಿಗೆ ಸ್ಪಂದಿಸುವ ಪ್ರಯತ್ನವನ್ನು ಕಲಾವಿದರು ಮಾಡಿದರು. ಶಂಭು ಕುಮಾರ್ ಕಿನ್ನಿಗೋಳಿ ಪುರುಷ ಪಾತ್ರದಲ್ಲಿ ಹಾಗೂ ಮುರಳೀಧರ ಕನ್ನಡಿಕಟ್ಟೆ ಸ್ತ್ರೀ ಪಾತ್ರದಲ್ಲಿ ಮಿಂಚಿದರೆ ಕಲಾವಿದರಾದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಕೋಡಪದವು ದಿನೇಶ್ ಕುಮಾರ್, ಬಂಗಾಡಿ ಸುಂದರ ಅವರ ಹಾಸ್ಯ ಮುದ ನೀಡಿತು. ವಿಶೇಷವಾಗಿ ಚಲನಚಿತ್ರ ನಟ ಅರವಿಂದ ಬೋಳಾರ್ ಅಭಿನಯ ಹಾಸ್ಯ ವೈಭವಕ್ಕೆ ಮೆರುಗು ಒದಗಿಸಿತು.
ಶಿವಪ್ರಸಾದ್ ಎಡಪದವು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಹರಿಪ್ರಸಾದ್ ಇಚಿಲಂಪಾಡಿ, ಶಶಿಧರ ಬಾಚಕೆರೆ ಹಿಮ್ಮೇಳದಲ್ಲಿ ಸಹಕಾರ ನೀಡಿದರು. ಅನೇಕ ದಾನಿಗಳು ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಹಕಾರ ನೀಡಿದರು.
ಒಟ್ಟು 57,808 ರೂಪಾಯಿ ದೇಣಿಗೆ ಸಂಗ್ರಹಿಸಿ ಸೇವಾ ಭಾರತಿಯ ಪ್ರತಿನಿಧಿ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರ ಮೂಲಕ ಕೊಡಗು ಜಿಲ್ಲಾ ನೆರೆ ಸಂತ್ರಸ್ತರ ನಿಧಿಗೆ ಹಸ್ತಾಂತರಿಸಲಾಯಿತು.
ಇದೇ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಪ್ರದರ್ಶನಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಆಯೋಜನೆಯ ಉದ್ದೇಶವನ್ನು ಶ್ಲಾಘಿಸಿದರು. ಸಂಘಟಕರಾದ ಕಲಾವಿದ ಅಶೋಕ ಶೆಟ್ಟಿ ಸರಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಂಜು ವಿಟ್ಲ ವಂದಿಸಿದರು. ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.