ಬಂಟ್ವಾಳ ತಾಲೂಕಿನ ಗೂಡಿನಬಳಿಯ ಮುಗ್ದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಂಟ್ವಾಳ ಬಿಜೆಪಿ ಯುವಮೋರ್ಚಾವು ತೀವ್ರವಾಗಿ ಖಂಡಿಸಿದ್ದು, ದೌರ್ಜನ್ಯಕ್ಕೊಳಗಾದ ಬಾಲಕಿಗೆ ವೈದ್ಯಕೀಯ ವೆಚ್ಚ, ಕಾನೂನಿನ ರಕ್ಷಣೆ ಮತ್ತು ಗರಿಷ್ಠ ಪರಿಹಾರ ನೀಡಬೇಕು ಮತ್ತು ಇವರ ಬಿಡುಗಡೆಗೆ, ಜಾಮೀನಿಗೆ ಪ್ರಯತ್ನಿಸುವ ವ್ಯಕ್ತಿಗಳ ಬಗ್ಗೆ ಪೋಲಿಸ್ ಇಲಾಖೆಯು ನಿಗಾ ಇಡಬೇಕಾಗಿ ಬಂಟ್ಟಾಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ ಆಗ್ರಹಿಸಿದ್ದಾರೆ.
ಆರೋಪಿಗಳನ್ನು ಸಕಾಲದಲ್ಲಿ ಬಂದಿಸಿದ ಪೋಲಿಸ್ ಇಲಾಖೆಯನ್ನು ಮತ್ತು ದೌರ್ಜನ್ಯದ ಗಂಭೀರತೆಯನ್ನು ತೆರೆದಿಟ್ಟ ಆಸ್ಪತ್ರೆಯ ವೈದ್ಯರನ್ನು ಬಂಟ್ವಾಳ ಬಿಜೆಪಿ ಯುವಮೋರ್ಚಾ ಅಭಿನಂದಿಸಿದ್ದು, ಸರಕಾರ ಮತ್ತು ಪೋಲಿಸ್ ಇಲಾಖೆ ಈ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೋಲಾರದಲ್ಲಿ ನಡೆದ ವಿದ್ಯಾರ್ಥಿನಿ ಹತ್ಯೆ ಪ್ರಕರಣದಂತೆ 6 ತಿಂಗಳಿನ ಒಳಗೆ ತೀರ್ಪು ಬಂದು ಆರೋಪಿಗಳಿಗೆ ಕಠೀನಾತಿಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಬುದ್ದಿವಂತರ ಜಿಲ್ಲೆ ಎಂದು ಗುರುತಿಸಿಕೊಂಡಿರುವ ನಮ್ಮ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಈ ರೀತಿಯ ಪ್ರಕರಣಗಳು ಆಗದಂತೆ ತಡೆಯುವ ನಿಟ್ಟಿನಲ್ಲಿ ಈ 8 ವರ್ಷದ ಮುಗ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳ ಪರವಾಗಿ ನ್ಯಾಯವಾದಿಗಳು ವಾದ ಮಾಡಬಾರದಾಗಿ ಗೌರವಾನ್ವಿತ ಬಾರ್ ಎಸೋಸಿಯೇಶನ್ ನನ್ನು ಬಂಟ್ವಾಳ ಬಿಜೆಪಿ ಯುವಮೋರ್ಚಾವು ವಿನಂತಿಸಿದೆ.