ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಬಿ.ಸಿ.ರೋಡಿನಿಂದ ಬೆಂಗಳೂರಿಗೆ ತೆರಳುವ ಹೊಸ ನಾನ್ ಎಸಿ ಸ್ಲೀಪರ್ ಕೋಚ್ ರಾತ್ರಿ ಸಾರಿಗೆ ಬಸ್ ವ್ಯವಸ್ಥೆಗೆ ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಸಿ.ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಇನ್ನೂ ಟೇಕ್ ಆಫ್ ಆಗಿಲ್ಲ. ಜನಬಳಕೆ ಹಾಗೂ ಬಸ್ಸುಗಳು ಸುಗಮವಾಗಿ ಬರಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ವೃತ್ತ ನಿರ್ಮಿಸುವುದು ಹಾಗೂ ರಸ್ತೆಯನ್ನು ಮಾರ್ಪಾಡುಗೊಳಿಸುವ ಮೂಲಕ ಬಸ್ ನಿಲ್ದಾಣಕ್ಕೆ ಬಸ್ಸುಗಳು ಬರುವಂತೆ ಹಾಗೂ ಮಳಿಗೆಗಳಲ್ಲಿ ವ್ಯಾಪಾರಿಗಳು ಬರುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಈ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಬಿ.ಸಿ.ರೋಡ್ ನಿಂದ ಬೆಂಗಳೂರಿಗೆ ಸದ್ಯ ರಾತ್ರಿ 9.30ಕ್ಕೆ ಹೊರಡುವ ಬಸ್, ಬಂಟ್ವಾಳ, ಕಾರಿಂಜೆ ಕ್ರಾಸ್, ಮೂರ್ಜೆ, ಪುಂಜಾಲಕಟ್ಟೆ, ಮಡಂತ್ಯಾರು, ಬೆಳ್ತಂಗಡಿ, ಧರ್ಮಸ್ಥಳ ಮೂಲಕ ತೆರಳುವುದು. ಬೆಂಗಳೂರಿನಿಂದ ರಾತ್ರಿ 11ಕ್ಕೆ ಇದೇ ಮಾರ್ಗವಾಗಿ ಬಿ.ಸಿ.ರೋಡಿಗೆ ಬಸ್ ಬರಲಿದ್ದು, ಈ ಸಾರಿಗೆಗೆ ಆನ್ ಲೈನ್ ಬುಕ್ಕಿಂಗ್ ಸೌಲಭ್ಯವಿದೆ. ಬಂಟ್ವಾಳ, ಮಣಿಹಳ್ಳ, ಕಾರಿಂಜೆ ಕ್ರಾಸ್, ಕಾವಳಕಟ್ಟೆ, ಮೂರ್ಜೆ, ಪುಂಜಾಲಕಟ್ಟೆ, ಮಡಂತ್ಯಾರು, ಮದ್ದಡ್ಕ, ಗುರುವಾಯನಕೆರೆ ಸ್ಥಳಗಳಲ್ಲಿ ಹತ್ತಿಸಿ, ಇಳಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ ಈ ಸಂದರ್ಭ ತಿಳಿಸಿದರು.
ಕಾರ್ಯಕ್ರಮದಲ್ಲಿ ಘಟಕ ವ್ಯವಸ್ಥಾಪಕ ಪಿ.ಇಸ್ಮಾಯಿಲ್, ಸಹಾಯಕ ಕಾರ್ಯಾಧೀಕ್ಷಕ ಲಿಯೋ ಅಂತೋಣಿ ತಾವ್ರೊ, ಲೆಕ್ಕಪತ್ರ ಮೇಲ್ವಿಚಾರಕ ಪೂರ್ಣೇಶ್, ಚಾರ್ಜ್ ಮೆನ್ ಪ್ರವೀಣ್ ಕುಮಾರ್, ಸಹಾಯಕ ರಮೇಶ್ ಶೆಟ್ಟಿ, ಬಿಜೆಪಿ ನಾಯಕಿ ಸುಲೋಚನಾ ಜಿ.ಕೆ.ಭಟ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ರಮಾನಾಥ ರಾಯಿ ಉಪಸ್ಥಿತರಿದ್ದರು. ರಮೇಶ್ ಶೆಟ್ಟಿ ಪ್ರಸ್ತಾವಿಸಿ, ವಂದಿಸಿದರು.