ಎಂಟು ವರ್ಷದ ಬಾಲಕಿಯ ಮೇಲೆ ಮೂವರು ಲೈಂಗಿಕ ದೌರ್ಜನ್ಯವೆಸಗಿದ ಆರೋಪವುಳ್ಳ ಪ್ರಕರಣ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಆರೋಪದಲ್ಲಿ ಬಿ.ಸಿ.ರೋಡ್ ಪಾಣೆಮಂಗಳೂರು ಸಮೀಪದ ಗೂಡಿನಬಳಿ ನಿವಾಸಿಗಳಾದ ಶೇಖಬ್ಬ(65), ರಝಾಕ್ (35) ಮತ್ತು ನವಾಝ್ (22) ಬಂಧಿತರಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದುಷ್ಕೃತ್ಯ ಬಯಲಿಗೆ ಬರುತ್ತಿದ್ದಂತೆ ಸಾರ್ವಜನಿಕರು ಬುಧವಾರ ರಾತ್ರಿ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದರು. ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್‌ಗಳಡಿ ಪ್ರಕರಣಗಳನ್ನು ದಾಖಲಿಸಿ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆಯ ಬಳಿಕ ಖಂಡನೆಗಳು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದ್ದು, ಹಲವು ಸಂಘಟನೆಗಳು ಈ ಕುರಿತು ಸೂಕ್ತ ತನಿಖೆಯಾಗಬೇಕು, ಆರೋಪಿಗಳಿಗೆ ಕಠಿಣ ಸಜೆಯಾಗಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಸಹಿತ ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಖಂಡಿಸಿ ಶುಕ್ರವಾರ ಪ್ರತಿಭಟನೆಗೂ ಸಂಘಟನೆಗಳು ಸಜ್ಜಾಗಿವೆ.
ಸಿಎಫ್‌ಐ, ಎನ್‌ಡಬ್ಲ್ಯುಎಫ್ ಪ್ರತಿಭಟನೆಗೆ ನಿರ್ಧಾರ:
ಕ್ಯಾಂಪಸ್ ಫ್ರಂಟ್ ಮತ್ತು ನ್ಯಾಷನಲ್ ವಿಮೆನ್ಸ್ ಫ್ರಂಟ್‌ನಿಂದ ಸೆ. 21 ರಂದು ಮಧ್ಯಾಹ್ನ 3 ಗಂಟೆಗೆ ಬಿ.ಸಿ.ರೋಡಿನ ಕೈಕಂಬದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಎಫ್‌ಐ, ಎನ್‌ಡಬ್ಲ್ಯುಎಫ್‌ನ ಜಂಟಿ ಪ್ರಕಟನೆ ತಿಳಿಸಿದೆ.
ಕಠಿಣ ಕ್ರಮಕ್ಕೆ ಒತ್ತಾಯಿಸಿ ಎನ್‌ಡಬ್ಲ್ಯೂಎಫ್‌ನಿಂದ ಎಸ್ಪಿಗೆ ಮನವಿ
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎನ್‌ಡಬ್ಲ್ಯೂಎಫ್ ನಿಯೋಗವು ಗುರುವಾರ ಜಿಲ್ಲಾ ವರಿಷ್ಠಾಧಿಕಾರಿ ಅವರಿಗೆ ಮನವಿ ಮೂಲಕ ಒತ್ತಾಯಿಸಿದೆ. ವುಮೆನ್ಸ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಕಾರ್ಯದರ್ಶಿ ಶಾಹಿದಾ ತಸ್ಲೀಮ್, ಬಂಟ್ವಾಳ ಸ್ಥಳೀಯ ಕೌನ್ಸಿಲರ್ ಗಳಾದ ಝೀನತ್ ಫೈರೋಝ್, ಸಂಶಾದ್ ಗೂಡಿನಬಳಿ, ಡಬ್ಲ್ಯೂಐಎಂ ಅಧ್ಯಕ್ಷೆ ನಸ್ರಿಯಾ ಬೆಳ್ಳಾರೆ
ಉಪಸ್ಥಿತರಿದ್ದರು.
ತನಿಖೆಗೆ ಕ್ಯಾಂಪಸ್ ಫ್ರಂಟ್ ಒತ್ತಾಯ
ಪ್ರಕರಣವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿಯು ಖಂಡಿಸಿದ್ದು, ಇಲಾಖೆಯು ಗಂಭೀರವಾಗಿ ಪರಿಗಣಿಸಿ, ಕೂಲಂಕುಷವಾಗಿ ತನಿಖೆ ನಡೆಸಿ ಬಾಲಕಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಬಾಲಕಿಗೆ ಸೂಕ್ತ, ಪರಿಹಾರ ನೀಡಬೇಕು ಎಂದು ಸಿಎಫೈ ಬಂಟ್ವಾಳ ತಾಲೂಕು ಅಧ್ಯಕ್ಷ ನಬೀಲ್ ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಮೆನ್ ಇ೦ಡಿಯಾ ಮೂಮೆ೦ಟ್, ಪಿಎಫ್‌ಐ ಖ೦ಡನೆ:
ವಿಮೆನ್ ಇ೦ಡಿಯಾ ಮೂಮೆ೦ಟ್ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಿಎಫ್‌ಐ ತಾಲೂಕು ಘಟಕ ಖ೦ಡಿಸಿದ್ದು, ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗ೦ಭೀರವಾಗಿ ತೆಗೆದುಕೊ೦ಡು ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಹಾಗೂ ವಿಮೆನ್ ಇ೦ಡಿಯಾ ಮೂಮೆ೦ಟ್‌ನ ಅಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಅವರು ಪ್ರಕಟಣೆಯಲ್ಲಿ ಈ ಆಗ್ರಹ ಮಾಡಿದ್ದಾರೆ.
ಬಂಟ್ವಾಳ ತಹಶೀಲ್ದಾರ್‌ಗೆ ಮನವಿ
ಜಮಾಅತೆ ಇಸ್ಲಾಮಿ ಹಿಂದ್ ಖಂಡನೆ
ಪ್ರಕರಣವನ್ನು ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ಮುಖ್ತಾರ್ ಅಹ್ಮದ್ ಅವರು ತೀವ್ರವಾಗಿ ಖಂಡಿಸಿದ್ದು, ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿದ್ದಾರೆ.