ಬಂಟ್ವಾಳ ತಾಲೂಕು ಸಿದ್ಧಕಟ್ಟೆಯ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿನಿ ರಮ್ಯಶ್ರೀ ಜೈನ್ ಆಂಧ್ರ ಪ್ರದೇಶದ ಕಥಕ್‌ನಲ್ಲಿ ನಡೆದ 34ನೇ ರಾಷ್ಟ್ರ ಮಟ್ಟದ ಜೂನಿಯರ್ ವಿಭಾಗದ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಗಳಿಸಿದ್ದಾಳೆ.
ಈ ಮೊದಲು ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದಿದ್ದ 34ನೇ ರಾಜ್ಯ ಜ್ಯೂನಿಯರ್ ಹಾಗೂ ಸಿನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಗುಂಡು ಎಸೆತದಲ್ಲಿ ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಳು. ಸೆ.14 ಮತ್ತು 15ರಂದು ಆಂಧ್ರ ಪ್ರದೇಶದ ಕಥಕ್‌ನಲ್ಲಿ ನಡೆದ 34ನೇ ರಾಷ್ಟ್ರೀಯ ಜ್ಯೂನಿಯರ್ ಹಾಗೂ ಸಿನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಯ ಪದಕಗಳಿಸಿದ್ದಾಳೆ. ಬಂಟ್ವಾಳ ತಾಲೂಕಿನ ಸಂಗಬೆಟ್ಟು ನಿವಾಸಿ ರವೀಂದ್ರ ಜೈನ್ ಮತ್ತು ಪದ್ಮಶ್ರೀ ದಂಪತಿಗಳ ಪುತ್ರಿ.
ಸಂಗಬೆಟ್ಟು-ಸಿದ್ಧಕಟ್ಟೆಯಲ್ಲಿ ಮಂಗಳವಾರ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಈ ಸಂದರ್ಭ ಶಾಲಾ ಸಂಚಾಲಕ ವಿಜಯ ಕುಮಾರ್ ಚೌಟ, ಶಾಲಾ ಮುಖ್ಯ ಶಿಕ್ಷಕಿ ಸಬಿತಾ ಲವೀನಾ, ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್, ಜಯಂತ್, ಕಾಲೇಜು ಪ್ರಾಂಶುಪಾಲ ಸಂತೋಷ್ ಕುಮಾರ್, ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಸಂಗಬೆಟ್ಟು ಗ್ರಾ.ಪಂ. ಸದಸ್ಯ ಮಾಧವ ಶೆಟ್ಟಿಗಾರ್, ಮಾಜಿ ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಕ್ರೀಡಾಪಟು ಜಯ ನಾಯ್ಕ, ಡಾ. ಪ್ರಭಾಚಂದ್ರ ಜೈನ್, ಡಾ. ಸುಧೀಪ್ ಕುಮಾರ್, ಉದ್ಯಮಿಗಳಾದ ಪ್ರಶಾಂತ್ ಶೆಟ್ಟಿ, ಭರತ್ ಜೈನ್ ಅಭಿನಂದಿಸಿದರು.