ಶಾಲಾ ಆವರಣದಲ್ಲೇ ಬ್ರಹ್ಮಾಂಡ ದರ್ಶನ ನೀಡುವ ಬಂಟ್ವಾಳ ರೋಟರಿ ಕ್ಲಬ್ ಸಾರಥ್ಯದ ಆರ್ಯಭಟ ಸಂಚಾರಿ ಪ್ಲಾನಿಟೋರಿಯಮ್‌ಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಸೋಮವಾರ ಬೆಳಿಗ್ಗೆ ಪಾಣೆಮಂಗಳೂರಿನ ಶ್ರೀಶಾರಾದ ಪ್ರೌಢಶಾಲೆಯಲ್ಲಿ ಚಾಲನೆ ನೀಡಿದರು.
ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಗರದ ವಿದ್ಯಾರ್ಥಿಗಳಿಗೆ ಮಾತ್ರ ತಾರಾಲಯದ ಮೂಲಕ ಸೌರಮಂಡಲಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಇತ್ತು. ಆದರೆ ಬಂಟ್ವಾಳ ರೋಟರಿ ಕ್ಲಬ್ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲಾ ಅಂಗಳದಲ್ಲೇ ಬಾಹ್ಯಕಾಶ ವೀಕ್ಷಿಸುವ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ತಹಶೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ಮಾತನಾಡಿ ಬಂಟ್ವಾಳ ರೋಟರಿ ಕ್ಲಬ್‌ನ ಈ ಪ್ರಯತ್ನ ಅಭಿನಂದನೀಯ ಎಂದರು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆರಂಭಿಕ ಹಂತದಲ್ಲಿ ಒಂದು ವಾರಗಳ ಕಾಲ ಏಳು ಶಾಲೆಗಳಲ್ಲಿ ವೀಕ್ಷಣೆಗೆ ಅವಕಾಶ ನೀಡುತ್ತೇವೆ. ಶಾಲಾ ಪರೀಕ್ಷೆಯ ಬಳಿಕ ಮತ್ತೆ ಪ್ರದರ್ಶನ ಮಾಡುವ ಬಗ್ಗೆ ತೀರ್ಮಾನಿಸಿದ್ದೇವೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ತುಂಬಾ ಪ್ರಯೋಜನವಾಗಲಿದೆ ಎಂದರು. ಶ್ರೀ ಶಾರಾದ ಪ್ರೌಢಶಾಲೆಯ ಸಂಚಾಲಕ ಜನಾರ್ದನ ಭಟ್, ಎಸ್‌ಎಲ್‌ಎನ್‌ಪಿ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಸುಭೋಧ್ ಪ್ರಭು, ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್, ಬಂಟ್ವಾಳ ರೋಟರಿ ಸುವರ್ಣ ವರ್ಷಾಚರಣೆಯ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಾಯಾಜಿ, ಪುರಸಭಾ ಸದಸ್ಯ ಗೋವಿಂದ ಪ್ರಭು ಉಪಸ್ಥಿತರಿದ್ದರು.
ತ್ರಿಡಿ ಸಂಚಾರಿ ತಾರಾಲಯದಲ್ಲಿ ನಕ್ಷತ್ರ ಹಾಗೂ ಗ್ರಹಗಳ ಚಲನೆ, ನಕ್ಷತ್ರಗಳ ಉಗಮ, ನಕ್ಷತ್ರ ಪುಂಜಗಳು, ಸೂರ್ಯ ಹಾಗೂ ಚಂದ್ರನ ತಿರುಗುವಿಕೆ, ಗ್ರಹಣ ಮೊದಲಾವುಗಳನ್ನು ನೋಡಿ ಶಾಲೆಯ ವಿದ್ಯಾರ್ಥಿಗಳು ಸಂಭ್ರಮಿಸಿದರು. ಸೌರಮಂಡಲದ ವಿಸ್ಮಯಗಳನ್ನು ಕಂಡು ಬೆರಗಾದರು.
ಮುಂದಿನ ಒಂದು ವಾರಗಳ ಕಾಲ ಮಾಣಿ ಬಾಲವಿಕಾಸ ಶಾಲೆ, ಎಸ್‌ವಿಎಸ್ ಪ್ರೌಢಶಾಲೆ ಬಂಟ್ವಾಳ, ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಬೆಂಜನಪದವು ಹಾಗೂ ಪೊಳಲಿ ಸರಕಾರಿ ಶಾಲೆಗಳಲ್ಲಿ ನಡೆಯಲಿದೆ. ಬಾಹ್ಯಕಾಶ ವಿಜ್ಞಾನ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಬಂಟ್ವಾಳ ರೋಟರಿಕ್ಲಬ್ ಮೊಬೈಲ್ ಪ್ಲಾನಿಟೋರಿಯಮ್ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು ಆಸಕ್ತ ಶಾಲಾಭಿವೃದ್ದಿ ಸಮಿತಿಯವರು ತಮ್ಮ ಶಾಲೆಗಳಲ್ಲಿ ಮೊಬೈಲ್ ಪ್ಲಾನಿಟೋರಿಯಮ್ ವೀಕ್ಷಿಸಲು ಬಯಸುವುದಾದರೆ ದೂರವಾಣಿ ಸಂಖ್ಯೆ 9740243751 ಸಂಪರ್ಕಿಸುವಂತೆ ಕೋರಲಾಗಿದೆ.