ದಕ್ಷಿಣಕನ್ನಡ ಜಿಲ್ಲಾ ಪಂಚಾಯತು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ ಹಾಗೂ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸುರಿಬೈಲು ಜಂಟಿ ಆಶ್ರಯದಲ್ಲಿ ಮೈಸೂರು ವಿಭಾಗೀಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟ ಸಂಪನ್ನಗೊಂಡಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಗರಿಷ್ಠ ಪ್ರಶಸ್ತಿಗಳು ಲಭಿಸಿವೆ.
ಹೈಸ್ಕೂಲ್ ಹುಡುಗರ ವಿಭಾಗದಲ್ಲಿ ಉಡುಪಿ ಪ್ರಥಮ ದ.ಕ ದ್ವಿತೀಯ, ಪ್ರಾಥಮಿಕ ಹುಡುಗರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಗಳಿಸಿದೆ.
ಹೈಸ್ಕೂಲ್ ಹುಡುಗಿಯರ ವಿಭಾಗದಲ್ಲಿ ದ.ಕ. ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ, ಪ್ರಾಥಮಿಕ ಹುಡುಗಿಯರ ವಿಭಾಗದಲ್ಲಿ ಉಡುಪಿ ಪ್ರಥಮ ಚಿಕ್ಕಮಗಳೂರು ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿದೆ. ಸೆ.14 ಮತ್ತು ಸೆ.15ರಂದು ಸುರಿಬೈಲು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾಕೂಟ ನಡೆಯಿತು. ಮೈಸೂರು ವಿಭಾಗ ವ್ಯಾಪ್ತಿಯ 8 ಜಿಲ್ಲೆಗಳ 32 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ 600 ರಷ್ಟು ವಿದ್ಯಾರ್ಥಿಗಳು ಆಟಗಾರರಾಗಿ ಭಾಗವಹಿಸಿದ್ದರು.