ಬಂಟ್ವಾಳ

ಶಾಲೆಯೊಳಗೆ ತಾರಾಲಯದ ಬೆರಗು: ರೋಟರಿ ಕ್ಲಬ್ ಬಂಟ್ವಾಳದಿಂದ ವಿದ್ಯಾರ್ಥಿಗಳಿಗೆ ವೀಕ್ಷಣೆಯ ಮೆರುಗು

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಬಾಹ್ಯಾಕಾಶದಲ್ಲೇನಿದೆ ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಭೂಮಂಡಲ, ನಭೋಮಂಡಲದ ಕೌತುಕಗಳನ್ನು ವೀಕ್ಷಿಸುವ ಆಸಕ್ತಿ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇರುತ್ತದೆ. ಆದರೆ ತಿಳಿಯಲು ಎಲ್ಲಿಗೆ ಹೋಗಬೇಕು ಎಂಬ ಸಮಸ್ಯೆ. ಮಂಗಳೂರಿನಲ್ಲೇನೋ ತ್ರಿ ಡಿ ತಾರಾಲಯವಿದೆ. ಆದರೆ ಅಲ್ಲಿವರೆಗೆ ಹೋಗಲು ಎಲ್ಲರಿಗೂ ಸಮಯ ಹೊಂದಾಣಿಕೆ ಕಷ್ಟ. ಇದನ್ನು ಮನಗಂಡು ಬಂಟ್ವಾಳದ ರೋಟರಿ ಕ್ಲಬ್ ಬಂಟ್ವಾಳ ತಾರಾಲಯದ ವಿಸ್ಮಯಗಳನ್ನು ಶಾಲಾ ಮಕ್ಕಳಿಗೆ ಒದಗಿಸುವ ಪ್ರಯತ್ನ ಮಾಡಿದೆ. ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಮಂಜುನಾಥ ಆಚಾರ್ಯ ಮತ್ತು ತಂಡ ಶಾಲಾ ಬಾಗಿಲಿಗೇ ಪ್ರದರ್ಶನವನ್ನು ಒದಗಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ರೋಟರಿ ಕ್ಲಬ್ ಬಂಟ್ವಾಳದ ಸುವರ್ಣ ವರ್ಷಾಚರಣೆ ಪ್ರಯುಕ್ತ ಈ ಅವಕಾಶ ಶಾಲೆ ಮಕ್ಕಳಿಗೆ ಲಭ್ಯವಾಗುತ್ತಿದೆ.

ಸುವರ್ಣ ವರ್ಷಾಚರಣೆ ಮಾಡುತ್ತಿರುವ ಬಂಟ್ವಾಳದ ರೋಟರಿ ಕ್ಲಬ್‌ನ ಅಧ್ಯಕ್ಷ ಮಂಜುನಾಥ ಆಚಾರ್ಯ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಈಗಾಗಲೇ ಕಾರ್ಯಗತಗೊಳಿಸಿದ್ದಾರೆ. ಆ ಪೈಕಿ ಅತ್ಯಂತ ವಿಶಿಷ್ಠವಾದುದು ಶಾಲಾ ಅಂಗಣದಲ್ಲಿ ತಾರಾಲಯ ವೀಕ್ಷಣೆ. ಮನೋರಂಜನೆಯೊಂದಿಗೆ ಶಿಕ್ಷಣ ನೀಡಬೇಕು,  ಪುಸ್ತಕದಲ್ಲಿ ಓದಿ ತಿಳಿದುಕೊಳ್ಳುವುದಕ್ಕಿಂತ, ಸ್ವತಃ ಅವುಗಳನ್ನು  ನೋಡಿ ಅನುಭವಿಸಿದರೆ ವಿದ್ಯಾರ್ಥಿಗಳ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎನ್ನುವ ಉದ್ದೇಶವನ್ನಿಟ್ಟುಕೊಂಡು ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿದ್ದ ದುಬಾರಿ ವೆಚ್ಚದ ತ್ರಿಡಿ ತಾರಾಲಯವನ್ನು ಬಂಟ್ವಾಳಕ್ಕೆ ಕರೆಸಿಕೊಂಡಿದ್ದಾರೆ.

17ನೇ ತಾರೀಕಿನಂದು ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆಯಲ್ಲಿ ಪ್ರಥಮ ಪ್ರದರ್ಶನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ತಹಶೀಲ್ದಾರ್ ಪುರಂದರ ಹೆಗ್ಡೆ , ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ ಕಾರಂತ, 50ನೇ ವರ್ಷಾಚರಣೆಯ ಸಂಚಾಲಕ ಡಾ. ರಮೇಶಾನಂದ ಸೋಮಯಾಜಿ ಸೇರಿದಂತೆ ರೋಟರಿ ಕ್ಲಬ್‌ನ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಆರ್ಯಭಟ ಮೊಬೈಲ್ ಪ್ಲೆನೆಟೋರಿಯಂನವರು ಈ ಪ್ರದರ್ಶನವನ್ನು ನೀಡಲಿದ್ದಾರೆ. ವಿಶೇಷವೆಂದದರೆ, ಬೆಂಗಳೂರಿನ ಹೊರವಲಯದಲ್ಲಿ ಅದೂ ಜಿಲ್ಲೆಯೊಂದರ ಗ್ರಾಮೀಣ ಪ್ರದೇಶದಲ್ಲಿ ಇಂಥ ಪ್ರದರ್ಶನ ನಡೆಯುತ್ತಿರುವುದು ಇದೇ ಮೊದಲು. ಪ್ರಾರಂಭಿಕ ಹಂತದಲ್ಲಿ ಒಂದುವಾರಗಳ ಕಾಲ ಬಂಟ್ವಾಳ ರೋಟರಿ ಕ್ಲಬ್ ಮಾಡಲಿದೆ.

ರೋಟರಿ ಕ್ಲಬ್‌ಗಳು  ಸೆಪ್ಟೆಂಬರ್ ತಿಂಗಳನ್ನು  ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತಾ ತಿಂಗಳನ್ನಾಗಿ ಆಚರಿಸುತ್ತಿದೆ. ಅದಕ್ಕೆ ಪೂರಕವಾಗಿ ವಿಭಿನ್ನ ಕಲ್ಪನೆ ಎನ್ನುವಂತೆ  ಶಾಲಾ ಅಂಗಣದಲ್ಲಿ ಬ್ರಹ್ಮಾಂಡ ದರ್ಶನವೂ ವಿಶಿಷ್ಟವಾಗಿ ಮೂಡಿ ಬರಲಿದೆ.

ಏನೇನಿರುತ್ತದೆ:

ನಕ್ಷತ್ರಮಂಡಲದ ಬ್ರಹ್ಮಾಂಡ ದರ್ಶನ ಇಲ್ಲಿರುತ್ತದೆ. ಸೂರ್ಯ ಹೇಗೆ ಬೆಳಕು ನೀಡುತ್ತಾನೆ, ಭೂಮಿ ಮತ್ತಿತರ ಗೃಹಗಳು  ಹೇಗೆ  ಸೂರ್ಯನ ಸುತ್ತ ಸುತ್ತುತ್ತದೆ, ಗ್ರಹಣಗಳು ಹೇಗೆ ಸಂಭವಿಸುತ್ತದೆ, ಧೂಮಕೇತು, ಉಲ್ಕೆಗಳು ಹೇಗೆ ಅಪ್ಪಳಿಸುತ್ತವೆ, ಶನಿಗ್ರಹಕ್ಕೆ ಮಾತ್ರ ಯಾಕೆ ಉಂಗುರದ ರಚನೆಯಿದೆ ಹೀಗೆ ಸೌರ ಮಂಡಲದ ಅಚ್ಚರಿಗಳ  ಬಗ್ಗೆ ವಿದ್ಯಾರ್ಥಿಗಳಲ್ಲಿ  ಕುತೂಹಲಗಳಿರುತ್ತದೆ. ಸೌರ ಮಂಡಲದಲ್ಲಿ ನಡೆಯುವ ಇಂತಹ ಅಧ್ಬುತಗಳನ್ನು, ಆಕಾಶಕಾಯಗಳ ಚಟುವಟಿಕೆಗಳು ಇಲ್ಲಿರುತ್ತವೆ. ಏಕಕಾಲದಲ್ಲಿ 40 ಮಂದಿ ವಿದ್ಯಾರ್ಥಿಗಳು ತಾರಾಲಯದಲ್ಲಿ ಕುಳಿತು ಬ್ರಹ್ಮಾಂಡ ದರ್ಶನ ಮಾಡಬಹುದಾಗಿದೆ. ಎಲ್‌ಕೆಜಿಯಿಂದ ದ್ವಿತೀಯ ಪಿಯೂಸಿವರೆಗಿನ ವಿದ್ಯಾರ್ಥಿಗಳು  ಶಾಲಾ ಅಂಗಳದಲ್ಲೇ ಕುಳಿತು  ನಭದಲ್ಲಿ ನಡೆಯುವ ವಿಸ್ಮಯವನ್ನು ಪ್ಲಾನಿಟೋರಿಯಂನಲ್ಲಿ ಆಸ್ವಾಧಿಬಹುದಾಗಿದೆ. ಸೌರಮಂಡಲದಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರ, ಗ್ರಹ, ಧೂಮಕೇತು, ನಕ್ಷತ್ರ ಪುಂಜ ಮತ್ತಿತರ ಆಕಾಶಕಾಯಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬಹುದಾಗಿದೆ. ಸೌರವ್ಯೂಹದ ಉಗಮ, ಬಾಹ್ಯಕಾಶಗಳ ಮಾಹಿತಿ ಸೇರಿದಂತೆ ಖಗೋಳ ವಿಜ್ಞಾನದ  ವಿಸ್ಮಯಗಳನನು  ತ್ರಿಡಿ ತಂತ್ರಜ್ಞಾನದ ಮೂಲಕ ಈ ವಿಶಿಷ್ಠ ಪ್ಲಾನಿಟೋರಿಯಮ್‌ನಲ್ಲಿ ವೀಕ್ಷಿಸಿ ತಿಳಿದುಕೊಳ್ಳಬಹುದಾಗಿದೆ.

ರಜಾ ಮಜಾ:

ಸೆ.17ರಿಂದ ಸೆ. 24ರವರೆಗೆ ಬಂಟ್ವಾಳ ತಾಲೂಕಿನ ಶಾಲೆಗಳಲ್ಲಿ ಪ್ರದರ್ಶನ ನೀಡಲಿದೆ. ಶಾಲಾ ರಜಾದಿನಗಳಾಗಿರುವ ಸೆ.21 ಹಾಗೂ ಸೆ.23ರಂದು ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ಸೌರಮಂಡಲ ವೀಕ್ಷಣೆಗೆ ಅವಕಾಶ ಕಲ್ಪಿಪಿಸಲಾಗಿದೆ. ಶಾಲೆಗಳಲ್ಲಿ ಪ್ರದರ್ಶನಕ್ಕೆ ಮಾಡಲು ಬಯಸುವವರು ದೂರವಾಣಿ ಸಂಖ್ಯೆ 9740243751ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ